ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಅನುಮತಿ ದೊರೆತಿಲ್ಲ

bir pacs
ಬೀರೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಬಿ.ಎಂ.ಕಾಂತರಾಜ್ ಮಾತನಾಡಿದರು. ಎ.ಬಿ.ಮಂಜುಳಾ, ಮಾರ್ಗದ ಬಿ.ಗಿರೀಶ್, ಎಂ.ಕುಮಾರ್ ಇತರರಿದ್ದರು.
Published on

ಬೀರೂರು: ಸರ್ಕಾರದಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆಗೆ ಅನುಮತಿ ದೊರೆತಿಲ್ಲ. ಸಂಘ ರೈತರ ಆರ್ಥಿಕಾಭಿವೃದ್ಧಿಗೂ ಹೆಚ್ಚಿನ ಒತ್ತು ನೀಡುತ್ತಿದೆ. ನಿರ್ದೇಶಕರು ಮತ್ತು ಷೇರುದಾರರ ಸಹಕಾರದಿಂದ ಹಣವನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿದ್ದರಿಂದ ಲಾಭದ ಹಾದಿಗೆ ಮರಳಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ.ಕಾಂತರಾಜ್ ತಿಳಿಸಿದರು.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ನಡೆದ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಷೇರುದಾರರಿಗೆ ಅನುಕೂಲ ಕಲ್ಪಿಸಲು ಆಡಳಿತ ಮಂಡಳಿ ಮುಂದಾಗಿದೆ ಎಂದರು.

ಸದಸ್ಯ ನಿಂಗಪ್ಪ ಮಾತನಾಡಿ, ರೈತರಿಗೆ ಗೊಬ್ಬರ ವಿತರಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ಖಾಸಗಿಯವರು ಜಿಎಸ್‌ಟಿ ಬಿಲ್ ನೀಡದೆ ಹೆಚ್ಚಿನ ದರ ವಿಧಿಸಿ ಗೊಬ್ಬರ ನೀಡುತ್ತಿದ್ದಾರೆ. ಇದರಿಂದ ರೈತರ ಮೇಲೆ ಹೊರೆಯಾಗುತ್ತಿದೆ. ಕೃಷಿ ಸಹಕಾರ ಸಂಘ ಈ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ವಿವಿಧ ರೈತರು ದನಿಗೂಡಿಸಿದರು. ಪ್ರತಿಕ್ರಿಯಿಸಿದ ಮೇಲ್ವಿಚಾರಕ ಎಚ್.ಬಿ.ಭರತ್, ಗೊಬ್ಬರ ಖರೀದಿಸಿದ ರೈತರು ದೂರುತ್ತಿದ್ದಾರೆಯೇ ಹೊರತು ದಾಖಲೆಗಳನ್ನು ನೀಡುತ್ತಿಲ್ಲ. ಹಾಗಾಗಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ರೈತರೆಲ್ಲ ಒಟ್ಟಾಗಿ ಬಂದು ದೂರು ನೀಡಿದರೆ ಹೋರಾಟಕ್ಕೆ ಸಂಘ ಸಿದ್ಧವಾಗಿರುತ್ತದೆ ಎಂದರು.

ಮುಖ್ಯಕಾರ್ಯನಿರ್ವಾಹಕ ಬಿ.ಆರ್.ಗಿರೀಶ್ ವಾರ್ಷಿಕ ವರದಿ ಮಂಡಿಸಿ, ಮೊದಲು ಷೇರು ಹಣ 250 ರೂ. ಇತ್ತು. ಇದು ಈಗ ಸರ್ಕಾರದ ಬೈಲಾ ತಿದ್ದುಪಡಿಯ ಪ್ರಕಾರ 1000 ರೂ.ಆಗಿದೆ. ಸಂಘದಲ್ಲಿ 1520 ಷೇರುದಾರರಿದ್ದು, ಇವರಲ್ಲಿ 250 ಮಂದಿ ಮಾತ್ರ ಬಾಕಿಯಾಗಿರುವ ಷೇರು ಹಣ ಪಾವತಿಸಿದ್ದಾರೆ. ಉಳಿದವರು ಪಾವತಿಸದಿದ್ದರೆ ಅವರ ಷೇರು ಅಮಾನತಿನಲ್ಲಿಡಲಾಗುತ್ತದೆ. ಷೇರುದಾರರು ಕನಿಷ್ಠ 3 ಸಭೆಗಳು ಮತ್ತು ಕನಿಷ್ಠ ವ್ಯವಹಾರ ಮಾಡದಿದ್ದಲ್ಲಿ ಅಂಥವರಿಗೆ ಮತದಾನದ ಹಕ್ಕು ಇರುವುದಿಲ್ಲ. ಆದ್ದರಿಂದ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ತಿಳಿಸಿದರು.

ಉಪಾಧ್ಯಕ್ಷೆ ಎ.ಬಿ.ಮಂಜುಳಾ, ನಿರ್ದೇಶಕರಾದ ಮಾರ್ಗದ ಬಿ.ಗಿರೀಶ್, ಎಂ.ಕುಮಾರ್, ಕೆ.ಎಚ್.ಜಗದೀಶ್, ಕೆ.ಆರ್.ಕಲ್ಲಪ್ಪ, ಜಿ.ಸಿ.ಲಿಂಗರಾಜ್, ಎಚ್.ವೆಂಕಟಗಿರಿಯಪ್ಪ, ಲಕ್ಷ್ಮಮ್ಮ ಮತ್ತು ಷೇರುದಾರರು, ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net