

ಬೀದರ್: ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ಕೊರತೆಯಾಗದಂತೆ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಎಷ್ಟು ಬೀಜದ ಅವಶ್ಯಕತೆಯಿದೆ ಎನ್ನುವ ಬಗ್ಗೆ ಗ್ರಾಮವಾರು ಮಾಹಿತಿ ಕಲೆ ಹಾಕಿ ಅದಕ್ಕನುಗುಣ ಬೇಕಾದಷ್ಟು ದಾಸ್ತಾನು ಮಾಡಿಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಗಳ ಮೂಲಕ ಪೂರೈಕೆಯಾಗುವ ಬೀಜ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಈ ಬಗ್ಗೆ ಮುಂಚಿತ ಖಚಿತಪಡಿಸಿಕೊಳ್ಳಬೇಕು. ಗುಣಮಟ್ಟ ಕುರಿತು ಯಾವುದೇ ದೂರು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಡಲೆ, ಜೋಳ, ಕುಸುಬೆ ಇತರೆ ಬೀಜಗಳನ್ನು ರೈತರಿಗೆ ಸಕಾಲದಲ್ಲಿ ದೊರೆಯುವ ವ್ಯವಸ್ಥೆ ಮಾಡಬೇಕು. ರಿಯಾಯಿತಿ ದರದಲ್ಲಿ ಬೀಜ ಪೂರೈಕೆ ಮಾಡುತ್ತಿರುವ ಬಗ್ಗೆ ರೈತರಿಗೆ ತಿಳಿಯಲು ಎಲ್ಲ ಗ್ರಾಮಗಳಲ್ಲಿ ಡಂಗೂರ ಸಾರಬೇಕು. ರೈತರ ಮೊಬೈಲ್ ಫೋನ್ಗಳಿಗೆ ಸಂದೇಶ ಕಳಿಸಲು ಸಹ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಈಗಾಗಲೇ ಕೆಲವು ಗ್ರಾಮಸ್ಥರು ದೂರು ಸಲ್ಲಿಸಿ, ಗ್ರಾಮ ಸಹಾಯಕರು ತಮ್ಮ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ. ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲವೆಂದು ದೂರಿದ್ದಾರೆ. ಕೃಷಿ ಅಧಿಕಾರಿಗಳು ಪ್ರತಿಯೊಂದು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪೂರೈಕೆ ವ್ಯವಸ್ಥಿತವಾಗಿ ನಡೆಯಬೇಕು. ಯಾವ ಕಾರಣಕ್ಕೂ ರೈತರಿಂದ ದೂರುಗಳು ಬರಕೂಡದು. ರೈತರಿಗೆ ತೊಂದರೆಯೂ ಆಗಬಾರದು. ಬೀಜ ಪೂರೈಕೆಯಲ್ಲಿ ಎಲ್ಲಾದರೂ ಲೋಪಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು.| ಪ್ರಭು ಚವ್ಹಾಣ್ಜಿಲ್ಲಾ ಉಸ್ತುವಾರಿ ಸಚಿವ