

ಮೈಸೂರು: ಬೀಜ ಎಂಬುದು ಬರೀ ಬಿತ್ತನೆ ವಸ್ತುವಲ್ಲ. ಅದು ಕೃಷಿಯ ಜೀವನಾಡಿ. ಸಾವಿರಾರು ವರ್ಷಗಳಿಂದ ಬೀಜ, ಕೃಷಿ ಬದುಕಿನ ಭಾಗವಾಗಿ, ಸಂಸ್ಕೃತಿಯ ಜತೆಯಾಗಿ ಬೆಸೆದುಕೊಂಡು ಬಂದಿದೆ ಎಂದು ಇಲವಾಲದ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ವಿಷ್ಣುವರ್ಧನ ಅಭಿಪ್ರಾಯಪಟ್ಟರು.
ಸಹಜ ಸಮೃದ್ಧಿ, ಸ್ವಿಸ್ ಏಡ್, ಫಿಬಲ್, ಸಾವಯವ ಕೃಷಿಕರ ಬಳಗದಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಮೈಸೂರು ಬೀಜ ಮೇಳ’ದಲ್ಲಿ ಶನಿವಾರ ಭಾಗವಹಿಸಿ ಅವರು ಮಾತನಾಡಿದರು.
ಗುಣಮಟ್ಟದ ಬೀಜಗಳು ಕೃಷಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸತ್ವಯುತ ಬೀಜ ಇದ್ದಾಗ ಮಾತ್ರ ಗುಣಮಟ್ಟದ ಫಸಲು ಬರಲು ಸಾಧ್ಯ. ಹಾಗಾಗಿ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದ ಬೀಜ ಸಂಸ್ಕೃತಿ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ಹೇಳಿದರು.
ರೈತರು ಬೀಜೋತ್ಪಾದನೆಯ ಕೌಶಲ್ಯವನ್ನು ಕಲಿತು, ತಮಗೆ ಅಗತ್ಯವಿರುವ ಬೀಜಗಳನ್ನು ತಾವೇ ಉತ್ಪಾದಿಸಿಕೊಳ್ಳಬೇಕು. ಇದರಿಂದ ಬೀಜಕ್ಕಾಗಿ ಮಾಡುವ ಖರ್ಚು ತಗ್ಗಿ ಕೃಷಿ ಲಾಭದಾಯಕವಾಗುತ್ತದೆ. ಸಾವಯವದಲ್ಲಿ ಬೆಳೆಸಿದ ಬೀಜ ಮತ್ತು ಗಿಡಗಳಿಗೆ ಅಪಾರವಾದ ಬೇಡಿಕೆ ಇದೆ. ಇವುಗಳ ಉತ್ಪಾದನೆಗೆ ಗಮನಕೊಡಬೇಕು ಎಂದು ಸಲಹೆ ನೀಡಿದರು.
ಕುಂದಗೋಳ ತಾಲೂಕು ತೀರ್ಥ ಗ್ರಾಮದ ಸಮುದಾಯ ಬೀಜ ಬ್ಯಾಂಕ್ ಮುಖ್ಯಸ್ಥ ಬೀಬಿಜಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಬೀಜ ವೈವಿಧ್ಯದ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಬಹುರಾಷ್ಟ್ರೀಯ ಕಂಪನಿಗಳ ದಾಳಿಯಿಂದ ಸ್ಥಳೀಯ ಬೀಜ ಸಂಸ್ಕೃತಿ ನಾಶವಾಗುತ್ತಿದೆ. ಹಿಂದೆ ಬೀಜವನ್ನು ಸಂಸ್ಕರಣೆ ಮಾಡಿ ಸ್ಥಳೀಯ ಪ್ರದೇಶಕ್ಕೆ ಅನುಗುಣವಾಗಿ ಬಿತ್ತನೆ, ಬೇಸಾಯ ನಡೆಯುತ್ತಿತ್ತು. ಆದರೆ ಈಗ ಬೀಜ ಸಂರಕ್ಷಣೆಯೇ ಇಲ್ಲದಂತಾಗಿದೆ ಎಂದು ಬೇಸರವ್ಯಕ್ತಪಡಿಸಿದರು.
ನಾಶದ ಜಾಡು ಹಿಡಿದಿರುವ ನೂರಾರು ನಾಡ ತಳಿಗಳು ಈಗಲೂ ಉಳಿದುಕೊಂಡಿವೆ. ಅವುಗಳನ್ನು ಮಹಿಳಾ ಸಂಘಗಳ ನಾಯಕತ್ವದಲ್ಲಿ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಿ ಸಂರಕ್ಷಣೆ ಮಾಡುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು. ತೀರ್ಥ ಗ್ರಾಮದಲ್ಲಿ ಮಹಿಳೆಯರು ಸೇರಿದಂತೆ ಹಲವಾರು ಸಮುದಾಯ ಬೀಜ ಬ್ಯಾಂಕ್ ಮತ್ತು ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಿ ಆ ಮೂಲಕ ಸ್ಥಳೀಯ ಬೀಜ ಸಂಸ್ಕೃತಿ ಸಂರಕ್ಷಣೆ ಮಾಡಲಾಗುತ್ತಿದೆ. ಇಂತಹ ಕಾರ್ಯ ಎಲ್ಲೆಡೆ ನಡೆಯಬೇಕು ಎಂದು ಹೇಳಿದರು.
ಗ್ರಾಮೀಣ ಮಹಿಳೆಯರು ಅಕ್ಕಡಿ ಪದ್ಧತಿಯ ಮೂಲಕ ವೈವಿಧ್ಯದ ಬೀಜಗಳನ್ನು ಬಿತ್ತಿ ಬೆಳೆಸುತ್ತಿದ್ದಾರೆ. ಮನೆಯ ಹಿತ್ತಲಿನಲ್ಲಿ ವಿವಿಧ ಬಗೆಯ ತರಕಾರಿ ಬೆಳೆಸಿ, ವೈವಿಧ್ಯವನ್ನು ಕಾಪಾಡುತ್ತಿದ್ದಾರೆ. ವಾಡೆ, ಗೂಡೆ, ಮೂಡೆಗಳಲ್ಲಿ ಬೀಜಗಳನ್ನು ಬಚ್ಚಿಟ್ಟು ಮುಂದಿನ ಪೀಳಿಗೆಗೆ ಸಾಗಿಸಿ ತರುತ್ತಿದ್ದಾರೆ. ಎಲೆಮರೆ ಕಾಯಿಯಂತೆ ಬೀಜ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಕೊಡುಗೆಯನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಬೀಜ ಸಂರಕ್ಷಕ ತಿ.ನರಸೀಪುರ ತಾಲೂಕು ಮಾಡ್ರಳ್ಳಿಯ ಶಂಕರಗುರು ಮಾತನಾಡಿ, ಮೈಸೂರು ಬೀಜ ಪರಂಪರೆಗೆ ಹೆಸರುವಾಸಿ. ಇಲ್ಲಿನ ಮಣ್ಣು, ವಾತಾವರಣಕ್ಕೆ ಹೊಂದಿಕೊಳ್ಳುವ ತಳಿಗಳ ಕಣಜವೇ ಇತ್ತು. ಸಾಲು ಬೆಳೆ, ಮಿಶ್ರ ಬೆಳೆ ಪದ್ಧತಿಗಳಿಂದ ಪ್ರತಿ ರೈತನ ಹೊಲವು ದೇಸಿ ತಳಿಗಳ ವೈವಿಧ್ಯದ ಭಂಡಾರವಾಗಿತ್ತು. ಆದರೆ ಹಸಿರು ಕ್ರಾಂತಿಯ ಹೆಸರಲ್ಲಿ ಅಧಿಕ ಇಳುವರಿ ತಳಿಗಳು ಕಾಲಿಟ್ಟು, ಸಾಂಪ್ರದಾಯಿಕ ತಳಿಗಳು ತೆರೆಮರೆಗೆ ಸರಿದವು ಎಂದು ಬೇಸರ ವ್ಯಕ್ತಪಡಿಸಿದರು.
ಈಗಂತೂ ಸಾರ ಹಾಗೂ ಸತ್ವವಿಲ್ಲದ ಭತ್ತಗಳೇ ಆದ್ಯತೆ ಪಡೆಯುತ್ತಿವೆ. ಇಳುವರಿಯೇ ಮೂಲ ಮಂತ್ರವಾಗಿ, ಮೂಲ ತಳಿಗಳ ರುಚಿ, ಬರಗಾಲ ನಿರೋಧಕತೆ, ಉತ್ತಮ ಮೇವಿನ ಗುಣ ವಿಶೇಷತೆಗಳೆಲ್ಲ ಮೂಲೆಗುಂಪಾಗಿವೆ. ಇಂಥ ಅಪರೂಪದ ದೇಸಿ ಬೀಜ ಸಂಪತ್ತನ್ನು ಸಂರಕ್ಷಿಸುತ್ತಿರುವ ಬೀಜ ಸಂರಕ್ಷಕರಿಗೆ ಅಗತ್ಯವಿರುವ ಆರ್ಥಿಕ ಮತ್ತು ತಾಂತ್ರಿಕ ಬೆಂಬಲ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಹಜ ಸಮೃದ್ಧಿಯ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಮಾತನಾಡಿ, ಹವಾಮಾನ ವೈಪರೀತ್ಯ ಬಿಕ್ಕಟ್ಟು ರೈತರನ್ನು ಕಂಗೆಡಿಸಿದೆ. ಇಂಥ ಪರಿಸ್ಥಿತಿಯಲ್ಲಿ ದೇಸಿ ಬೀಜ ವೈವಿಧ್ಯ ಹಾಗೂ ನೈಸರ್ಗಿಕ ಕೃಷಿ ಈ ಬಿಕ್ಕಟ್ಟಿಗೆ ಸಮರ್ಥ ಪರಿಹಾರ ಕೊಡುತ್ತದೆ. ಮಳೆಯಾಧಾರಿತ ಬೆಳೆ ಪದ್ಧತಿಯನ್ನು ರೈತರು ಅನುಸರಿಸಬೇಕು ಹಾಗೂ ಮರೆತುಹೋಗಿರುವ ಆಹಾರ ಬೆಳೆಗಳನ್ನು ಗ್ರಾಹಕರು ಮತ್ತೆ ಬಳಸುವ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ದೇವಧಾನ್ಯ ರೈತ ಉತ್ಪಾದಕರ ಕಂಪನಿಯ ನಿಷಾಂತ್ ಬಂಕಾಪುರ, ಸಹಜ ಸಮೃದ್ಧಿಯ ಅಣೆಕಟ್ಟೆ ವಿಶ್ವನಾಥ್ ಇತರರು ಇದ್ದರು.