

ಚನ್ನರಾಯಪಟ್ಟಣ: ಮೌಂಡೋಸ್ ಚಂಡಮಾರುತದ ಪರಿಣಾಮ ಕಳೆದ 3-4 ದಿನಗಳಿಂದ ಎಡಬಿಡದಂತೆ ಸುರಿಯುತ್ತಿದ್ದ ಮಳೆಯು ಮಂಗಳವಾರ ಮುಂಜಾನೆಯಿಂದ ಬಿಡುವು ನೀಡಿದ ಹಿನ್ನೆಲೆ ತಾಲೂಕಿನ ಜನತೆ ಸದ್ಯ ನಿಟ್ಟುಸಿರು ಬಿಟ್ಟು ನಿರಾಳಗೊಂಡಿದ್ದಾರೆ.
ಮೋಡ ಕವಿದ ವಾತಾವರಣದೊಂದಿಗೆ ಶನಿವಾರ ಪ್ರಾರಂಭಗೊಂಡ ಜಿಡಿ ಮಳೆಯು ಮೂರು ದಿನಗಳ ಕಾಲ ಬಿಡುವು ನೀಡದಂತೆ ಸುರಿಯಿತು. ಅಲ್ಲದೇ ಸೋಮವಾರ ಮಧ್ಯರಾತ್ರಿ ಸುಮಾರಿನಲ್ಲಿ ಜೋರಾಗಿಯೇ ಸುರಿಯಿತು.
ನಂತರ ಮಂಗಳವಾರ ಬೆಳಗಿನ ಜಾವದಿಂದ ಬಿಡುವು ನೀಡಿದ್ದು ಸದ್ಯ ರೈತರು ನಿಟ್ಟುಸಿರು ಬಿಡುತ್ತಿದ್ದಾರೆ. ಮೂರು ದಿನಗಳಿಂದ ಕೊಟ್ಟಿಗೆಯಲ್ಲಿಯೇ ಕಟ್ಟಿದ್ದ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದಾರೆ.
ಕಳೆದ 3-4 ದಿನಗಳಿಂದ ಎಡಬಿಡದಂತೆ ಸುರಿಯುತ್ತಿದ್ದ ಜಿಡಿ ಮಳೆಯ ಪರಿಣಾಮ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜತೆಗೆ ವಿದ್ಯುತ್ ಸಮಸ್ಯೆ ತಲೆದೂರಿದ್ದು ಮಳೆ ಬೀಡುವು ನೀಡಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯವರು ಸರಿಪಡಿಸುವಲ್ಲಿ ಮುಂದಾಗಬೇಕು ಎಂಬುದು ರೈತರ ಮನವಿಯಾಗಿದೆ.
ಪೂರ್ವ ಮುಂಗಾರಿನಿಂದಲೂ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಕೆರೆಕಟ್ಟೆಗಳು ಮೈದುಂಬಿ ಹರಿದು 2-3 ಬಾರಿ ಕೋಡಿ ಬಿದಿದ್ದವು. ಕಳೆದ 20 ದಿನಗಳಿಂದ ಮಳೆ ನಿಂತಿತ್ತು.
ಆದರೆ ಮೌಂಡೋಸ್ ಚಂಡಮಾರುತದ ಪರಿಣಾಮ ಅಕಾಲಿಕ ಮಳೆ ಸುರಿಯುತಿದ್ದು ಸೋಮವಾರ ರಾತ್ರಿ ಹೆಚ್ಚು ಮಳೆಯಾದ ಪರಿಣಾಮ ದಿಡಗ, ನರಿಹಳ್ಳಿ, ಬಾಳಗಂಚಿ ಸೇರಿದಂತೆ ತಾಲೂಕು ವ್ಯಾಪ್ತಿಯ ಬಹುತೇಕ ಕೆರೆ ಕಟ್ಟೆಗಳು ಮತ್ತೊಮ್ಮೆ ಕೋಡಿ ಬಿದ್ದು ಹಳ್ಳ ಕೊಳ್ಳಗಳಲ್ಲಿ ನೀರು ಹರಿಯುತ್ತಿದೆ.
25 ವರ್ಷಗಳ ಬಳಿಕ ನೀರು ಕಂಡ ಹಳ್ಳಕೊಳ್ಳಗಳಲ್ಲಿ ಜೌಗು ಹರಿಯುತ್ತಿತ್ತು. ಸೋಮವಾರ ರಾತ್ರಿ ಮಳೆ ಸುರಿದ ಪರಿಣಾಮ ಒಂದಷ್ಟು ಪ್ರಮಾಣದಲ್ಲಿ ನೀರು ಹರಿಯಲಾರಂಭಿಸಿದೆ.
ಈ ನಂತರ ಮಳೆ ಬಿಡುವು ನೀಡಿದರೆ ಕಟಾವು ಹಂತದಲ್ಲಿರುವ ರಾಗಿ ಬೆಳೆಯ ಕಟಾವು ಕಾರ್ಯ ಮುಂದುವರಿಯಲಿದ್ದು ಈಗಾಗಲೇ ಕಟಾವು ಮಾಡಿ ಜಮೀನಿನಲ್ಲಿಯೇ ಮಳೆಯಲ್ಲಿ ನೆನೆಯುತ್ತ ಬಿದ್ದಿದ್ದ ರಾಗಿ ಹುಲ್ಲನ್ನು ಒಕ್ಕಣೆ ಮಾಡಿ ಮೆದೆಗೆ ಸೇರಿಸುವ ತವಕದಲ್ಲಿ ರೈತರು ಇದ್ದಾರೆ.