ಬಿಡುವು ನೀಡಿದ ಮಳೆಯಿಂದ ಜನತೆ ನಿರಾಳ

13 CRP 01
Published on

ಚನ್ನರಾಯಪಟ್ಟಣ: ಮಾಂಡೌಸ್ ಚಂಡಮಾರುತದ ಪರಿಣಾಮ ಕಳೆದ ಮೂರ‌್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆಯು ಮಂಗಳವಾರ ಮುಂಜಾನೆಯಿಂದ ಬಿಡುವು ನೀಡಿದ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ನಿಟ್ಟುಸಿರುಬಿಟ್ಟಿದ್ದಾರೆ.


ಮೋಡ ಕವಿದ ವಾತಾವರಣದೊಂದಿಗೆ ಶನಿವಾರ ಪ್ರಾರಂಭಗೊಂಡ ಜಿಟಿ ಮಳೆಯು ಮೂರು ದಿನಗಳ ಕಾಲ ಬಿಡುವು ನೀಡದಂತೆ ಸುರಿಯಿತು. ಅಲ್ಲದೇ ಸೋಮವಾರ ಮಧ್ಯರಾತ್ರಿ ಜೋರಾಗಿಯೇ ಸುರಿಯಿತು.
ಮಂಗಳವಾರ ಬೆಳಗಿನ ಜಾವದಿಂದ ಬಿಡುವು ನೀಡಿದ್ದು, ಸದ್ಯ ರೈತರು ನಿಟ್ಟುಸಿರು ಬಿಡುತ್ತಿದ್ದಾರೆ. ಮೂರು ದಿನಗಳಿಂದ ಕೊಟ್ಟಿಗೆಯಲ್ಲಿಯೇ ಕಟ್ಟಿದ್ದ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದಾರೆ.


ಜಿಟಿ ಮಳೆಯ ಪರಿಣಾಮ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜತೆಗೆ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಮಳೆ ಬಿಡುವು ನೀಡಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯವರು ಸರಿಪಡಿಸಲು ಮುಂದಾಗಬೇಕು ಎಂಬುದು ರೈತರ ಮನವಿಯಾಗಿದೆ.


ಮಳೆ ಬಿಡುವು ನೀಡಿದರೆ ರಾಗಿ ಬೆಳೆಯ ಕಟಾವು ಮುಂದುವರಿಯಲಿದ್ದು, ಈಗಾಗಲೇ ಕಟಾವು ಮಾಡಿ ಜಮೀನಿನಲ್ಲಿಯೇ ಮಳೆಯಲ್ಲಿ ನೆನೆಯುತ್ತ ಬಿದ್ದಿದ್ದ ರಾಗಿ ಹುಲ್ಲನ್ನು ಒಕ್ಕಣೆ ಮಾಡಿ ಮೆದೆಗೆ ಸೇರಿಸುವ ತವಕದಲ್ಲಿ ರೈತರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net