

ಬೀದರ್: ಮಹಾಮಾರಿ ಕರೊನಾ ವೈರಸ್‌ನಿಂದ ವಿಳಂಬವಾಗಿದ್ದ ಕಾರ್ಯಚಟುವಟಿಕೆಗಳು ಇನ್ಮುಂದೆ ಚುರುಕಾಗಿ ನಡೆಯಬೇಕು. ಈಗಾಗಲೇ ಬಿಡುಗಡೆಯಾದ ಅನುದಾನದ ಗುರಿ ಸಾಧನೆಗೆ ಕ್ರಮ ವಹಿಸಲು ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿಚಡ್೯ ವಿನ್ಸೆಂಟ್ ಡಿಸೋಜಾ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕರೊನಾ ಕಾರಣ ನೀಡಿ ವಿವಿಧ ಕಾಮಗಾರಿ ನನೆಗುದಿಗೆ ಬೀಳಬಾರದು. ವಿವಿಧ ಇಲಾಖೆಯಲ್ಲಿ ಬಿಡುಗಡೆಯಾದ ಅನುದಾನ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಮರ್ಪಕ ಮಾಹಿತಿ ನೀಡದ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಕೆಲ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಕಾರ್ಯದರ್ಶಿ ಡಿಸೋಜಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಡಿಸಿ ರಾಮಚಂದ್ರನ್ ಆರ್. ಮಾತನಾಡಿ, ಅಧಿಕಾರಿಗಳು ಕಾರಣ ಹೇಳಿ ಸಭೆಯಿಂದ ದೂರ ಉಳಿಯಬಾರದು. ಸಭೆಗೆ ಅಗತ್ಯ ಮಾಹಿತಿಯೊಂದಿಗೆ ಹಾಜರಾಗಬೇಕು. ಯೋಜನೆಗಳ ಅನುಷ್ಠಾನದ ಬಗ್ಗೆ ಸ್ಪಷ್ಟವಾದ ಮಾಹಿತಿ ನಿಡಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಇಲ್ಲಿವರೆಗೆ ಹೆಚ್ಚುವರಿ ಶೇ.25ರಷ್ಟು ಮಳೆ ಬಿದ್ದಿದೆ. ತೊಗರಿ ಬೆಳೆ ಕಟಾವು ಪ್ರಗತಿಯಲ್ಲಿದೆ. ಬೆಳೆಹಾನಿಯ ಸಮೀಕ್ಷೆ ಪೂರ್ಣಗೊಂಡಿದ್ದು, ಪರಿಹಾರ ವಿತರಣೆ ಪ್ರಗತಿಯಲ್ಲಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್. ತಿಳಿಸಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಗುರುತಿನ ಚೀಟಿ ವಿತರಿಸಿ
ಸಭೆಗೂ ಮುನ್ನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿಸೋಜಾ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬೀದರ್, ಬಸವಕಲ್ಯಾಣ, ಭಾಲ್ಕಿ, ಔರಾದ್ ಮತ್ತು ಹುಮನಾಬಾದ್ ತಹಸೀಲ್ದಾರ್ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದರು. ಅರ್ಜಿ ನಮೂನೆ 6, 7, 8 ಮತ್ತು 8ಎ ಗಳ ಪರಿಶೀಲನಾ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಜ.18ಕ್ಕೆ ಅಂತಿಮ ಮತದಾರರ ಯಾದಿ ಪ್ರಕಟಿಸಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ಮತದಾರ ದಿವಸ್ ಆಚರಣೆಗೆ ಈಗಿನಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರಿದ ಯುವ ಮತದಾರರಿಗೆ ಗುರುತಿನ ಚೀಟಿ ವಿತರಣೆಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಬೀದರ್ ತಹಸೀಲ್ದಾರ್ ಸಿ.ಎಚ್.ಗಂಗಾದೇವಿ ಹಾಗೂ ಅಧಿಕಾರಿಗಳು ಇದ್ದರು.