ಬಿಡಾಡಿ ದನಗಳ ಉಪಟಳಕ್ಕೆ ಬೆಚ್ಚಿದ ನಾಗರಿಕರು

mdl
ಮುದಗಲ್ ಪೊಲೀಸ್ ಠಾಣೆ ಮುಂಭಾಗದ ರಸ್ತೆಯಲ್ಲಿ ಬಿಡಾಡಿದನಗಳು ಕಾದಾಟದಲ್ಲಿ ತೊಡಗಿದ್ದರಿಂದ ವಾಹನ ಸವಾರರು ತೊಂದರೆ ಪಡುತ್ತಿರುವುದು.
Published on

ಮುದಗಲ್: ಪಟ್ಟಣದ ಮುಖ್ಯ ರಸ್ತೆ ಇತರೆಡೆ ಬಿಡಾಡಿ ದನಗಳ ಉಪಟಳ ಹೆಚ್ಚಾಗಿದೆ. ಇವುಗಳ ಕಾದಾಟದಿಂದಾಗಿ ನಾಗರಿಕರು ಬೆಚ್ಚಿ ಬೀಳುವಂತಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.


ಪಟ್ಟಣದ ಪುರಸಭೆ ಮುಂಭಾಗದ ಲಿಂಗಸುಗೂರು ರಸ್ತೆ, ಬಸ್ ನಿಲ್ದಾಣ ಮತ್ತು ತರಕಾರಿ ಮಾರುಕಟ್ಟೆ, ಮಸ್ಕಿ ರಸ್ತೆ, ಶಾಲಾ ಸಂಪರ್ಕ ರಸ್ತೆಯಲ್ಲಿ ನಿತ್ಯ ನೂರಾರು ದನಗಳು ಹಿಂಡು ಹಿಂಡಾಗಿ ಓಡಾಡುತ್ತವೆ.

ರಸ್ತೆ ಮೇಲೆಯೇ ಕಾದಾಟಕ್ಕೆ ಇಳಿಯುವ ದನಗಳು ಅಂಗಡಿ, ಪಾದಚಾರಿಗಳು ಹಾಗೂ ವಾಹನದ ಮೇಲೆ ದಾಳಿ ಮಾಡುತ್ತಿವೆ. ಇದರಿಂದ ಬೈಕ್ ಸವಾರರು, ಆಟೋ ಚಾಲಕರು, ಪಾದಚಾರಿಗಳು ಆಯತಪ್ಪಿ ಬಿದ್ದು ಗಾಯಮಾಡಿಕೊಳ್ಳು ಸ್ಥಿತಿ ನಿರ್ಮಾಣವಾಗಿದೆ.

ಶಾಲಾ, ಕಾಲೇಜುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದನಗಳ ದಾಳಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ತೊಂದರೆ ಅನಿಭವಿಸುವಂತಾಗಿದೆ. ನಾಗರಿಕರು ರೋಸಿ ಹೋಗಿದ್ದಾರೆ. ವಾರದ ಸಂತೆ ಆವರಣದಲ್ಲಿ, ತರಕಾರಿ ಅಂಗಡಿಗಳಿಗೆ ನುಗ್ಗುವ ದನಗಳು ತರಕಾರಿ, ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ.

ಗ್ರಾಹಕರ ಕೈಯಲ್ಲಿನ ತರಕಾರಿ ಕೈ ಚೀಲಗಳನ್ನು ಕಿತ್ತುಕೊಳ್ಳುತ್ತಿವೆ. ಕೋಡಿನಿಂದ ತಿವಿದು ಗಾಯಗೊಳಿಸಿದ ಉದಾಹರಣೆಗಳಿವೆ. ಇಷ್ಟಾದರೂ ಪುರಸಭೆ ಅಧಿಕಾರಿಗಳು ರಸ್ತೆ ಮೇಲೆ ಬೀಡು ಬಿಡುವ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಿಲ್ಲ.

ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಬಿಡಾಡಿ ದನಗಳನ್ನು ಬೇರೆಕಡೆಗೆ ಅಥವಾ ಗೋ ಶಾಲೆಗಳಿಗೆ ಸೇರಿಸಬೇಕು ಎಂಬುದು ನಾಗರಿಕರ ಒತ್ತಾಸೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net