

ಮೇಲುಕೋಟೆ: ಮೇಲುಕೋಟೆಯಲ್ಲಿ ಗೂಳಿಗಳ ಕಾಟಕ್ಕೆ ಮುಕ್ತಿ ನೀಡಲು ಗ್ರಾಮ ಪಂಚಾಯಿತಿ ಕೊನೆಗೂ ಕಾರ್ಯಾಚರಣೆ ಆರಂಭಿಸಿದ್ದು ಶುಕ್ರವಾರ ಐದಾರು ಬಿಡಾಡಿ ದನಗಳನ್ನು ಗುರುತಿಸಿ ನಾಗರಿಕರ ಸಹಾಯದಿಂದ ಸೆರೆಹಿಡಿದು ಪಿಂಜ್ರಾಪೋಲ್‌ಗೆ ಕಳುಹಿಸುವ ಕೆಲಸ ಮಾಡಿದೆ. ಇನ್ನೂ ಹತ್ತಾರು ಗೂಳಿಗಳಿದ್ದು, ಅವುಗಳನ್ನೂ ತಕ್ಷಣ ಹಿಡಿದು ದೊಡ್ಡಿಗೆ ಕಳುಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹರಕೆ ಹೊತ್ತ ಭಕ್ತರು ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯಕ್ಕೆ ಬಿಟ್ಟ ಗೂಳಿಗಳು ದೇಗುಲಕ್ಕೆ ಬರುವ ಭಕ್ತರು ಹಾಗೂ ಸ್ಥಳೀಯರನ್ನು ಗುದ್ದಿ ಗಾಯಗೊಳಿಸುತ್ತಿದ್ದವು. ಅಲ್ಲದೇ ಭಕ್ತರ ವಾಹನಗಳನ್ನು ಗುದ್ದಿ ಹಾನಿ ಮಾಡುತ್ತಿದ್ದವು. ನಾಗರಿಕರು ಗೂಳಿಕಾಟಕ್ಕೆ ಮುಕ್ತಿಕೊಡಬೇಕೆಂದು ಗ್ರಾಮಸಭೆಯಲ್ಲೂ ಒತ್ತಾಯಿಸಿ ಮನವಿ ಮಾಡಲಾಗಿತ್ತಾದರೂ ಪ್ರಯೋಜನವಾಗಿರಲಿಲ್ಲ.
ಗುರುವಾರ ಬೆಳಗ್ಗೆ ಗೂಳಿಯೊಂದು ಮೇಲುಕೋಟೆ ನಿವಾಸಿ ಸಾಕಮ್ಮ ಎಂಬ ಮಹಿಳೆಗೆ ಗುದ್ದಿ ತೀವ್ರ ಗಾಯ ಮಾಡಿತ್ತು. ಗುದ್ದಿದ ರಭಸಕ್ಕೆ ಕಣ್ಣಿಗೂ ಗಾಯವಾಗಿ ಮೂಳೆ ಮುರಿದಿತ್ತು. ಮೇಲುಕೋಟೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಡ್ಯದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸಗಾಗಿ ಬೆಂಗಳೂರಿಗೆ ರವಾನಿಸಲಾಗಿತ್ತು.
ಈ ಘಟನೆಯ ಹಿಂದೆಯೇ ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಗ್ರಾಮ ಪಂಚಾಯಿತಿ ಶುಕ್ರವಾರ ಗೂಳಿ ಹಿಡಿಯುವ ಕಾರ್ಯಾಚರಣೆ ಮಾಡಿ ಐದಾರು ಬಿಡಾಡಿ ದನಗಳನ್ನು ಹಿಡಿದು ಮೈಸೂರಿನ ಪಿಂಜ್ರಾಪೋಲ್ ಸುರಕ್ಷಿತವಾಗಿ ಕಳುಹಿಸುವ ಕೆಲಸಮಾಡಿದೆ.
ಕಾರ್ಯಾಚರಣೆಯ ಮಾಹಿತಿ ನೀಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರ ನಾಗರಿಕರ ಮನವಿಗೆ ಸ್ಪಂದಿಸಿ ಪಂಚಾಯಿತಿ ಅಧ್ಯಕ್ಷೆ ಮಣಿಮುರುಗನ್, ಉಪಾಧ್ಯಕ್ಷ ಜಿ.ಕೆ. ಕುಮಾರ್, ಸದಸ್ಯ ತಿರುಮಲೈ ಹಾಗೂ ಎಲ್ಲ ಸದಸ್ಯರ ಸಹಕಾರದಲ್ಲಿ ಗೂಳಿಗಳನ್ನು ಹಿಡಿಯುವ ಕಾರ್ಯ ಆರಂಭಿಸಿದ್ದೇವೆ. ಇನ್ನೆರಡು ದಿನಗಳಲ್ಲಿ ಎಲ್ಲ ಬಿಡಾಡಿ ಗೂಳಿಗಳನ್ನು ಹಿಡಿದು ಪಿಂಜರಾಪೋಲ್‌ಗೆ ಕಳುಹಿಸುವ ಕಾರ್ಯಮಾಡಲಾಗುತ್ತದೆ ಎಂದರು.
ಪತ್ರಕರ್ತರೊಂದಿಗೆ ಮಾತನಾಡಿದ ಪುಳಿಯೋಗರೆ ರವಿ, ಈಶಮುರಳಿ, ದಿಲೀಪ್, ಗಂಗಾಧರ್, ಗೂಳಿ, ಕೋತಿ ಆಡುಗಳ ಕಾಟಕ್ಕೆ ಗ್ರಾಮಪಂಚಾಯಿತಿ ಮತ್ತು ಅರಣ್ಯ ಇಲಾಖೆ ಕಡಿವಾಣ ಹಾಕಬೇಕಿದೆ. ಮುಖ್ಯವಾಗಿ ಕೆ.ಆರ್.ಪೇಟೆ ವಸಂತಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕಾರ್ಯಾಚರಣೆ ನಡೆಸಿ ಕೋತಿಗಳನ್ನು ಹಿಡಿದು ಅಭಯಾರಣ್ಯಕ್ಕೆ ಬಿಟ್ಟ ಮಾದರಿಯಲ್ಲೇ ಇಲ್ಲೂ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಮನವಿಮಾಡಿದ್ದಾರೆ