

ಮೈಸೂರು: ಬಿಟ್ಟಿ ಯೋಜನೆಗಳಿಗೆ ಹಣಕಾಸನ್ನು ಹೇಗೆ ಹೊಂದಿಸಿಕೊಳ್ಳುತ್ತಾರೆ ಎಂಬುದನ್ನು ರಾಜ್ಯ ಸರ್ಕಾರ ಜನರಿಗೆ ತಿಳಿಸಬೇಕು. ರಾಜ್ಯದಲ್ಲಿ ಹೆಚ್ಚುವರಿ ತೆರಿಗೆ ವಿಧಿಸುತ್ತೀರಾ ಅಥವಾ ಸಾಲದ ಮೇಲೆ ಸಾಲ ಮಾಡುತ್ತೀರಾ ಎಂಬುದನ್ನು ಮೊದಲು ತಿಳಿಸಿ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರು ಬಹಳ ಖುಷಿಯಿಂದ ಬಸ್‌ನಲ್ಲಿ ಓಡಾಡುತ್ತಿದ್ದಾರೆ. ಆದರೆ, ಕೆಎಸ್‌ಆರ್‌ಟಿಸಿಗೆ ಆಗುವ ನಷ್ಟವನ್ನು ಹೇಗೆ ಭರಿಸುತ್ತಾರೆ ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಹಣಕಾಸಿನ ಸ್ಥಿತಿ ಹೇಗಿದೆ? ಒಟ್ಟು ಎಷ್ಟು ಸಾಲದಲ್ಲಿ ನಮ್ಮ ರಾಜ್ಯ ಇದೆ, ಅದಕ್ಕೆ ಪ್ರತಿ ವರ್ಷ ಇದಕ್ಕೆ ಎಷ್ಟು ಬಡ್ಡಿ ಕಟ್ಟಬೇಕು. ಇದನ್ನು ಆಲೋಚನೆ ಮಾಡಿ ಯಾವುದೇ ರಾಜ್ಯ ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡಬೇಕು. ಆದರೆ, ಈ ಬಗ್ಗೆ ಗಮನ ಹರಿಸದೆ ಕಾಂಗ್ರೆಸ್ ಬಹಳ ಧೈರ್ಯದಿಂದ ಗ್ಯಾರೆಂಟಿ ಘೋಷಣೆ ಮಾಡಿದೆ. ಚುನಾವಣೆ ಸಂದರ್ಭ ಗ್ಯಾರೆಂಟಿಗಳಿಗೆ ಯಾವುದೇ ಕಂಡಿಷನ್ ಇರಲಿಲ್ಲ. ಆದರೆ, ಇದೀಗ ಎಲ್ಲ ಕಂಡಿಷನ್‌ಗಳನ್ನು ವಿಧಿಸುತ್ತಿದ್ದಾರೆ. 200 ಯುನಿಟ್‌ವರೆಗೆ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರ ಏರಿಕೆ ಮಾಡಿದೆ. ಒಂದೆಡೆ ಉಚಿತ ವಿದ್ಯುತ್ ನೀಡಿ ಮತ್ತೊಂದೆಡೆ ಜನರಿಂದ ಹಣ ಕಸಿದುಕೊಳ್ಳುವ ಕಾರ್ಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರೆಂಟಿ ವಿರೋಧಿಸುವವರು ಮನುವಾದಿಗಳು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನು ಕೇಂದ್ರದ ಮೇಲೆ ಹಾಕಿ ಕೈತೊಳೆದುಕೊಳ್ಳುವ ಆಲೋಚನೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದರೆ ಅದಕ್ಕೆ ಜನರು ಉತ್ತರಿಸುತ್ತಾರೆ ಎಂದರು.
ದೇಶದಲ್ಲಿ ಮುಂಗಾರು ಬಹಳ ಬೇಗ ಆರಂಭವಾಗಬೇಕಿತ್ತು, ಆದರೆ ಈ ಬಾರಿ ತಡವಾಗಿದೆ. ರೈತರು ಕೃಷಿ ಚಟುವಟಿಕೆಗೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಕೃಷಿ ಇಲಾಖೆಯ ಅಧಿಕಾರಗಳ ಜತೆ ನಿರಂತರ ಸಭೆ ನಡೆಸುತ್ತಿದೆ. ದೇಶದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಬಿತ್ತನೆ ಬೀಜ ಬೇಕು, ಎಷ್ಟು ರಸಗೊಬ್ಬರ ಬೇಕು ಎಂಬ ಮಾಹಿತಿ ಪಡೆಯಲಾಗುತ್ತಿದೆ. ಈ ಬಾರಿಯೂ ಮುಂಗಾರಿಗೂ ಮುನ್ನ ರಾಜ್ಯ ಕೃಷಿ ಇಲಾಖೆ ಜತೆ ಸಭೆ ನಡೆಸಲಾಗುವುದು. ಸದ್ಯಕ್ಕೆ ದೇಶದಲ್ಲಿ ರಸ ಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆ ಕಂಡು ಬಂದಿಲ್ಲ ಎಂದರು.