

ಕೊಪ್ಪ: ಸುಹಾಸ್ ಶೆಟ್ಟಿ ಸಾವಿಗೆ ಬಿಜೆಪಿ ಪ್ರಚೋದನಕಾರಿ ರಾಜಕಾರಣವೇ ಕಾರಣ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಖಂಡಿಸಿ ಇತ್ತೀಚೆಗೆ ಹಿಂದು ಸಂಘಟನೆ ಕರೆಕೊಟ್ಟಿದ್ದ ಬಂದ್ ಅನ್ನು ಬೆಂಬಲಿಸಿದ್ದೆವು. ಆದರೆ ಬಿಜೆಪಿ ಮುಖಂಡರು ಶೃಂಗೇರಿಯಲ್ಲಿ ಮುಖ್ಯಮಂತ್ರಿ, ಗೃಹ ಸಚಿವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದು ಖಂಡನೀಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುಹಾಸ್ ಶೆಟ್ಟಿ ವಿರುದ್ಧ ಎರಡು ಕೊಲೆ ಪ್ರಕರಣ ದಾಖಲಾಗಿದ್ದು, ಆರ್.ಅಶೋಕ್ ಅವಧಿಯಲ್ಲಿ ರೌಡಿ ಶೀಟರ್ ತೆರೆಯಲಾಗಿತ್ತು. ಹಿಂದುಪರ ಎಂದು ಹೇಳುವ ಬಿಜೆಪಿ ಮುಖಂಡರು ಎಲ್ಲಿಯೂ ಅವರ ಮಕ್ಕಳನ್ನು ಧರ್ಮ ರಕ್ಷಣೆಗೆ ಕಳುಹಿಸಲ್ಲ. ಹಿಂದು ಸಂಘಟನೆಯ ಕಾರ್ಯಕರ್ತರಿಗೆ ಬಿಜೆಪಿ ಮೋಸ ಮಾಡುತ್ತಿದೆ ಎಂದು ಟೀಕಿಸಿದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಹಿಂದು ಕಾರ್ಯಕರ್ತನ ಕೊಲೆ ಎಂದು ಬಿಂಬಿಸಿದ್ದಾರೆ. ಒಬ್ಬ ವ್ಯಕ್ತಿ ಒಂದು ಪಕ್ಷ, ಸಂಘಟನೆಯ ಕಾರ್ಯಕರ್ತನಾಗಬಲ್ಲ. ಆದರೆ ಒಂದು ಧರ್ಮದ ಕಾರ್ಯಕರ್ತ ಎಂದು ಕರೆಯಬಾರದು. ಯಾವ ಧರ್ಮವನ್ನೂ ಯಾರಿಗೂ ಗುತ್ತಿಗೆ ಕೊಟ್ಟಿಲ್ಲ ಎಂದರು.
ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ವಯಸ್ಸಾಗಿದೆ, ಆದರೆ ಬುದ್ಧಿ ಬಂದಿಲ್ಲ. ಅವರು ಸುಹಾಸ್ ಶೆಟ್ಟಿ ಮೃತ ದೇಹ ನೋಡಲು ಬಂದ ಸಂದರ್ಭದಲ್ಲಿ ಕಾರು ಇಳಿಯುವಾಗ ನಗುತ್ತಿದ್ದರು ಎಂದು ಟೀಕಿಸಿದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರಾಮಾಣಿಕ ರಾಜಕಾರಣಿ ಎಂದು ಹೆಸರು ಪಡೆದವರು. ಅಂಥವರ ವಿರುದ್ಧ ಬಿಜೆಪಿಗರು ಬೇಕಾಬಿಟ್ಟಿ ಮಾತನಾಡಿದ್ದಾರೆ. ಶಾಸಕ ಹರೀಶ್ ಪೂಂಜಾ ಅವರು ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಮಾನ ಮರ್ಯಾದೆ ಇಲ್ಲದವರು ಕೇಸ್ ನೂರು ಹಾಕಲಿ ಎದುರಿಸುತ್ತೇವೆ ಎಂದು ಹೇಳುತ್ತ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಸಿಇಟಿ ಸುತ್ತೋಲೆಯಲ್ಲಿ ಜನಿವಾರ ತೆಗೆಸುವಂತೆ ಎಲ್ಲೂ ಸೂಚಿಸಿರಲಿಲ್ಲ. ಇದು ಬಿಜೆಪಿ ಮನಸ್ಥಿತಿಯ ಅಧಿಕಾರಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿ ಎಂದು ಕೃತ್ಯ ನಡೆಸಿರಬಹುದು. ಜನಿವಾರ ತೆಗೆಸಿದ ಮೂರ್ಖ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಕೇಂದ್ರ ಸರ್ಕಾರವೇ ಪರೀಕ್ಷೆ ವೇಳೆ ಜನಿವಾರ ತೆಗೆಸಬೇಕು ಎಂದು ಸುತ್ತೋಲೆ ಹೊರಡಿಸಿದೆ. ಬಿಜೆಪಿಗರು ಈಗ ಮಾತನಾಡುತ್ತಿಲ್ಲ. ಎಂದರು.
ಪಹಲ್ಗಾಮ್ ಘಟನೆ ಗುಪ್ತಚರ ಇಲಾಖೆ ವೈಫಲ್ಯ ಎಂದು ಆಡಳಿತ ಪಕ್ಷವೇ ಒಪ್ಪಿಕೊಂಡಿದೆ. ದೇಶದಲ್ಲಿ ಶಾಂತಿ ನೆಲೆಸಬೇಕು, ಈ ನಿಟ್ಟಿನಲ್ಲಿ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಕಾಂಗ್ರೆಸ್ ಬೆಂಬಲವಿರುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಮುಖಂಡರಾದ ನುಗ್ಗಿ ಮಂಜುನಾಥ್, ನವೀನ್ ಕರುವಾನೆ, ಸಂತೋಷ್ ಕುಲಾಸೋ, ಪ್ರಕಾಶ್ ಪೂಜಾರಿ, ಕೀರ್ತಿರಾಜ್, ಹರೀಶ್, ಪ್ರಶಾಂತ್, ಓಣಿತೋಟ ರತ್ನಾಕರ್, ಪಪಂ ಸದಸ್ಯರಾದ ವಿಜಯಕುಮಾರ್, ಸಂದೇಶ್ ಇದ್ದರು.