

ಮೈಸೂರು: ಬಿಜೆಪಿಯವರು ಸುಳ್ಳು ಆರೋಪ ಮಾಡಿ ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಯತ್ನ ಮಾಡುತ್ತಿದ್ದು, ಸಿದ್ದರಾಮಯ್ಯ ವರ್ಚಸ್ಸಿಗೂ ಧಕ್ಕೆ ತರಲು ಹುನ್ನಾರ ನಡೆಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ನೀಡಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪ್ರಜಾಪ್ರಭುತ್ವ ಕೊಲ್ಲುವ ಯತ್ನ ಮಾಡುತ್ತಿದ್ದಾರೆ. ಅವರ ಮುಖ್ಯ ಟಾರ್ಗೆಟ್ ಅಧಿಕಾರಕ್ಕೆ ಬರುವುದು. ಸಿಎಂ ಹೆಸರಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನಿಸುತ್ತಿದ್ದಾರೆ. ತಪ್ಪು ಮಾಡದಿದ್ದರೂ ತನಿಖಾ ಸಂಸ್ಥೆಯನ್ನು ಅವರ ವಿರುದ್ಧ ಬಳಸಿಕೊಳ್ಳುತ್ತಿದ್ದಾರೆ. ಉಪಚುನಾವಣೆಯಲ್ಲಿ ಜನರು ನಮಗೆ ಬೆಂಬಲ ಸೂಚಿಸಿದ್ದಾರೆ. ನಮಗೆ ನೈತಿಕ ಸ್ಥೈರ್ಯ ಸಿಕ್ಕಿದೆ. ಹೀಗಾಗಿ ನಾವು ರಾಜೀನಾಮೆ ಕೊಡಲ್ಲ ಎಂದರು.
ಮೂರು ಉಪಚುನಾವಣೆ ಫಲಿತಾಂಶ ಬಂದ ಬಳಿಕ ನಮಗೆ ವಿಶ್ವಾಸ ಹೆಚ್ಚಾಗಿದೆ. ಜನರ ಬೆಂಬಲ ನಮ್ಮ ಪರವಾಗಿದೆ. ಹೀಗಾಗಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಅಧ್ಯಕ್ಷರ ಬಗ್ಗೆ ಮಾತನಾಡಲು ನನಗೆ ಅರ್ಹತೆ ಇಲ್ಲ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ಹೇಳಿದರು
ಇಡಿ ತನಿಖೆಯಲ್ಲಿ ತಂದೆಯ ಆರೋಪದ ಮೇಲೆ ವಿಚಾರಣೆ ನಡೆಯುತ್ತಿಲ್ಲ. ಇಡಿಗೆ ವಿಚಾರಣೆ ಮಾಡುವ ಹಕ್ಕು ಸಹ ಇಲ್ಲ. ಮುಡಾ ಪ್ರಕರಣದಲ್ಲಿ ಸತ್ಯ ಏನು ಇಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆರ್‌ಟಿಐ ಕಾರ್ಯಕರ್ತ ಮಾಡಿರುವ ಆರೋಪದಲ್ಲಿ ಸತ್ಯಾಂಶ ಇಲ್ಲ. ಬಿಜೆಪಿ-ಜೆಡಿಎಸ್‌ನವರು ಅಧಿಕಾರದ ಹಪಾಹಪಿಯಿಂದ ಏನು ಬೇಕಾದರೂ ಮಾಡುತ್ತಾರೆ. ನಮಗೆ ಕೇಂದ್ರ ತನಿಖಾ ಸಂಸ್ಥೆಯ ಮೇಲೆ ನಂಬಿಕೆ ಇಲ್ಲ ಎಂದರು.
ಸಿಎಂ ಪತ್ನಿಗೆ ಸೇರಿದ ಜಮೀನಿನ ಮೇಲೆ ಮತ್ತೊಂದು ಪ್ರಕರಣ ದಾಖಲು ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಈ ಪ್ರಕರಣ ಕೋರ್ಟ್‌ನಲ್ಲಿ ತೀರ್ಮಾನ ಆಗುತ್ತದೆ. ದೂರುದಾರರು ಇಷ್ಟು ವರ್ಷಗಳು ಸುಮ್ಮನಿದ್ದು, ಈಗ ಪ್ರಕರಣ ದಾಖಲಿಸಿದ್ದಾರೆ. ತಹಸೀಲ್ದಾರ್ ಮುಂದೆ ಒಪ್ಪಿಗೆ ಸೂಚಿಸಿ ನಮಗೆ ಬರೆದುಕೊಟ್ಟಿದ್ದಾರೆ. ದೇವರಾಜ್ ತಪ್ಪು ಮಾಡಿದ್ರೆ ಇದು ನಮ್ಮ ತಪ್ಪಲ್ಲ. ಕೋರ್ಟ್‌ನಲ್ಲೇ ಎಲ್ಲವೂ ತೀರ್ಮಾನ ಆಗುತ್ತದೆ ಎಂದರು.
ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ದಕ್ಕೆ ಹಾಸನದಲ್ಲಿ ಡಿ.5ರಂದು ಸಮಾವೇಶ ಮಾಡಲಾಗುತ್ತಿದೆ. ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಸಮಾವೇಶ ಮೂಲಕ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ಕೊಡಲಿದ್ದಾರೆ. ಉಪಚುನಾವಣೆ ಫಲಿತಾಂಶದಿಂದ ಉತ್ತರ ಸಿಕ್ಕಿದೆ. ಇದು ಕಾಂಗ್ರೆಸ್ ಪಕ್ಷದಿಂದಲೇ ಮಾಡುತ್ತಿರುವ ಸಮಾವೇಶ. ಇದಕ್ಕೆ ಪಕ್ಷದಿಂದ ಸಂಪೂರ್ಣ ಒಪ್ಪಿಗೆ ಇದೆ ಎಂದರು.
ಹಾಸನ ಸಮಾವೇಶ ಬಗ್ಗೆ ಎಐಸಿಸಿಗೆ ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಮಾವೇಶಕ್ಕೆ ಹೈಕಮಾಂಡ್ ಒಪ್ಪಿಗೆ ಇದೆ. ಹರಿದಾಡುತ್ತಿರುವ ಪತ್ರದ ಬಗ್ಗೆ ನನಗೆ ಗೊತ್ತಿಲ್ಲ. ಆ ಪತ್ರ ನಕಲಿ ಇರಬಹುದು. ಈಗಾಗಲೇ ಮೈಸೂರಿನಲ್ಲಿ ಮುಡಾ ವಿಚಾರಕ್ಕೆ ಮುಡಾ ಸಮಾವೇಶ ಮಾಡಲಾಗಿದೆ. ಹೀಗಾಗಿ ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದೇವೆಯಷ್ಟೇ ಎಂದರು.
ತಾವು ನ್ಯಾಯಾಲಯದ ಬಗ್ಗೆ ಮಾತನಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಅವರು, ನಾನು ನಿರ್ದಿಷ್ಟ ಪ್ರಕರಣದ ಬಗ್ಗೆ ಮಾತನಾಡಿಲ್ಲ. ಜನರ ಮನಸ್ಸಿನಲ್ಲಿ ಏನು ಇದೆಯೋ ಅದರ ಬಗ್ಗೆ ಮಾತನಾಡಿದ್ದೇನೆ. ದೇಶಕ್ಕೆ ಮಾರಕ ಆಗುವ ರೀತಿ ಕೋರ್ಟ್‌ನಿಂದ ತೀರ್ಪು ಬರುತ್ತಿದೆ. ದೇಶಕ್ಕೆ ಒಳ್ಳೆಯ ರೀತಿ ತೀರ್ಪು ಬಂದಿಲ್ಲ. ಸೆಬಿ ವಿಚಾರ, ಅದಾನಿ ವಿಚಾರ, ಬಾಬ್ರಿ ಧ್ವಂಸದ ವಿಚಾರದಲ್ಲಿ ದೇಶದ ಪರ ತೀರ್ಪು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
-----------