

ಮೈಸೂರು: ರಂಗಾಯಣವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ರಂಗಾಯಣದಲ್ಲಿ ತೇಜೋವಧೆ ಮಾಡುವ ಕೆಲಸ ನಡೆದಿದೆ. ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್ ಗುಡುಗಿದರು.
ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವ ಅಡ್ಡಂಡ ಸಿ.ಕಾರ್ಯಪ್ಪ ನೇತೃತ್ವದಲ್ಲಿ ರಂಗಾಯಣದಲ್ಲಿ ನಡೆದ ನಾಟಕವೊಂದರಲ್ಲಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿದ್ದು, ಇವರನ್ನು ರಂಗಾಯಣದಿಂದ ವಜಾ ಮಾಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿದ್ದರಾಮಯ್ಯ ಅವರ ಅನ್ನಭಾಗ್ಯದ ಮಹತ್ವ ಕರೊನಾ ವೇಳೆ ಎಲ್ಲರಿಗೂ ಅರಿವಾಯಿತು. ಈ ಕಾರ್ಯಕ್ರಮ ಇಲ್ಲದಿದ್ದಲ್ಲಿ ದೇಶದಲ್ಲಿ ಲಕ್ಷಾಂತರ ಜನರು ಹಸಿವಿನಿಂದಲೇ ಸಾಯಬೇಕಾಗಿತ್ತೆಂದು ವಿಶ್ವಸಂಸ್ಥೆ ಸಹ ಹೇಳಿರುವುದನ್ನು ಇಲ್ಲಿ ಉದಾಹರಿಸಬಹುದಾಗಿದೆ. ಆದರೆ, ನಾಟಕದಲ್ಲಿ ಅವರ ಬಗ್ಗೆ ಟೀಕೆ ಮಾಡಲಾಗಿದೆ ಎಂದು ದೂರಿದರು.
ಸಿದ್ದರಾಮಯ್ಯ ಅವರ ಬಗ್ಗೆ ನಿಜಕನಸು ಹೆಸರಿನಲ್ಲಿ ಪುಸ್ತಕ ತಂದು ತೇಜೋವಧೆ ಮಾಡುವ ಕೆಲಸ ನಡೆದಿದೆ. ಸಿದ್ದರಾಮಯ್ಯ ಅವರ 5 ವರ್ಷಗಳ ಆಡಳಿತದ ಅವಧಿಯಲ್ಲಿನ ಕಾರ್ಯಕ್ರಮ ಹಾಗೂ ತಮ್ಮ ಅವಧಿಯಲ್ಲಿನ ಕಾರ್ಯಕ್ರಮಗಳ ಬಗ್ಗೆ ಬಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರಲ್ಲದೆ, ಈಗ ರಾಜ್ಯದಲ್ಲಿ ಇರುವುದು 40 ಪರ್ಸೆಂಟ್ ಕಮಿಷನ್ ತಿನ್ನುವ ಸರ್ಕಾರ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮಹಿಳೆಯರಲ್ಲಿ ನಾಯಕತ್ವ ಗುಣ ಉತ್ತೇಜಿಸುವ ಉದ್ದೇಶದಿಂದ ಜ.16ರಂದು ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ‘ನಾ ನಾಯಕಿ’ ಮಹಿಳಾ ಸಮಾವೇಶ ಆಯೋಜಿಸಲಾಗಿದೆ. ಇದರಲ್ಲಿ ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಇದೇ ವೇಳೆ ಮಾಹಿತಿ ನೀಡಿದರು.