ಬಿಜೆಪಿಯಿಂದ ಮುಸ್ಲಿಂ, ದಲಿತರಿಗೆ ಕಿರುಕುಳ: ಎಚ್.ಡಿ.ರೇವಣ್ಣ ಆರೋಪ

ಬಿಜೆಪಿಯಿಂದ ಮುಸ್ಲಿಂ, ದಲಿತರಿಗೆ ಕಿರುಕುಳ: ಎಚ್.ಡಿ.ರೇವಣ್ಣ ಆರೋಪ
Published on

ಹಾಸನ : ಬಿಜೆಪಿ ಪಕ್ಷ ಅಧಿಕಾರ ಬಂದ ದಿನದಿಂದಲೂ ಮುಸ್ಲಿಂ ಹಾಗೂ ದಲಿತರನ್ನು ಗುರಿ ಮಾಡಿಕೊಂಡು ಅವರನ್ನು ದೂರ ಇಡುವ ಹುನ್ನಾರ ನಡೆಸಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.
ದಲಿತ-ಮುಸ್ಲಿಂ ಒಕ್ಕೂಟದ ವತಿಯಿಂದ ನಗರದ ಸಂತೆಪೇಟೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶುಕ್ರವಾರ ಆಯೋಜಿಸಿದ್ದ ಬೈಕ್ ರ‌್ಯಾಲಿ ನಂತರ ಡಾ. ಬಿ.ಅರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ರೇವಣ್ಣ ಅವರು, ದೇಶಕ್ಕೆ ಸ್ವಾತಂತ್ರೃ ಬಂದು ಇಷ್ಟು ವರ್ಷವಾದರೂ ಬಾರದ ಟಿಪ್ಪು, ಹಿಜಾಬ್, ತಲಾಖ್ ಹೆಸರಲ್ಲಿ ಸಮಾಜದ ಶಾಂತಿ ಕದಡುವ ಕೆಲಸವಾಗುತ್ತಿದೆ ಎಂದು ದೂರಿದ್ದರು.
ಮುಸ್ಲಿಮರು ಹಾಗೂ ದಲಿತರು ಬಿಜೆಪಿ ಸಿದ್ಧಾಂತ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಒಂದಲ್ಲಾ ಒಂದು ನೆಪ ತೆಗೆದು ಕಿರುಕುಳ ನೀಡುತ್ತಿದ್ದಾರೆ. ಇದೇ ಉದ್ದೇಶದಿಂದ ಅನಗತ್ಯ ಕಾನೂನುಗಳನ್ನೂ ಜಾರಿಗೆ ತರುತ್ತಿದ್ದಾರೆ. ದೇವೇಗೌಡರ ಅವಧಿಯಲ್ಲಿ ಶೇ.4 ರಷ್ಟು ಮೀಸಲಾತಿ ನೀಡುವ ಮೂಲಕ ಅಲ್ಪಸಂಖ್ಯಾತರನ್ನು ಮೇಲೆತ್ತುವ ಕೆಲಸ ಮಾಡಿದ್ದರು. ನಾನು ಸಚಿವನಾಗಿದ್ದ ಎಂಟು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಯಾವ ಭಾಗದಲ್ಲೂ ಘರ್ಷಣೆಗೆ ಅವಕಾಶ ನೀಡಲಿಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಾಸಕ ಪ್ರೀತಂಗೌಡ ವಿರುದ್ಧ ವಾಗ್ದಾಳಿ:
ಕಳೆದ ಚುನಾವಣೆಯಲ್ಲಿ ಜನರು ಮಾಡಿದ ಒಂದು ತಪ್ಪಿನಿಂದ ಈ ಕ್ಷೇತ್ರದಲ್ಲಿ ಏನೆಲ್ಲಾ ಅನುಭವಿಸುವಂತಾಗಿದೆ. ದುಡ್ಡಿನ ದರ್ಪದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಅವರಿಗೆಲ್ಲ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ನನ್ನ ಜೀವ ಇರುವವರೆಗೆ ಹಿಂದು-ಮುಸ್ಲಿಮರ ನಡುವೆ ಸಂಘರ್ಷವಾಗಲು ಅವಕಾಶ ಕೊಡುವುದಿಲ್ಲ. ನಾವೆಲ್ಲ ಒಟ್ಟಾಗಿದ್ದರೆ ಅವರು ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಶಾಸಕ ಪ್ರೀತಂ ಜೆ.ಗೌಡ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕೆಲವು ಕಡೆ ಮುಸಲ್ಮಾನರು ಮಾಡುವ ಸಣ್ಣ-ಪುಟ್ಟ ವ್ಯಾಪಾರಕ್ಕೆ ತೊಂದರೆ ಕೊಡುವ ಕೆಲಸವಾಗುತ್ತಿದೆ. ತಮಗೆ ಬೆಂಬಲ ನೀಡದವರ ವಿರುದ್ಧ ಸುಳ್ಳು ಕೇಸ್ ಹಾಕಿಸುವ ಕೆಲಸ ನಡೆಯುತ್ತಿದೆ. ಎಲ್ಲದಕ್ಕೂ ಅಂತ್ಯ ಇದ್ದೇ ಇರುತ್ತದೆ. ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ ಕಾಲದಲ್ಲಿ ಬಡ ಸಮುದಾಯದವರಿಗೆ ನಾನೇ 4 ಸಾವಿರ ನಿವೇಶನ ಹಂಚಿಕೆ ಮಾಡಿದ್ದೆ. ಎಚ್‌ಡಿಕೆ ಅಧಿಕಾರದ ಅವಧಿಯಲ್ಲಿ ಆಟೋ ಚಾಲಕರಿಗೆ ಸಾಕಷ್ಟು ನೆರವು ನೀಡಲಾಗಿತ್ತು. ಚಿಪ್ಪಿನಕಟ್ಟೆ ಭಾಗದಲ್ಲಿ ಅಭಿವೃದ್ದಿ ಕೆಲಸ ಮಾಡಿದ್ದೇನೆ. ಆದರೆ ಈಗ ಯಾವುದೋ ಒಂದು ಪತ್ರ ಕೊಟ್ಟು ಓಟು ಹಾಕಿ ಎಂದು ಮುಸಲ್ಮಾನರಿಗೆ ಹೆದರಿಸುತ್ತಿದ್ದಾರೆ. ಯಾವುದಕ್ಕೂ ನೀವು ಹೆದರುವ ಅವಶ್ಯತೆ ಇಲ್ಲ. ನಾನು ನಿಮ್ಮ ಜೊತೆ ಇರುತ್ತೇನೆ. ನೀವು ಧೈರ್ಯವಾಗಿರಿ ಎಂದು ಅಭಯ ನೀಡಿದರು.
ಪೊಲೀಸರಿಗೆ ಎಚ್ಚರಿಕೆ:
ಇಲ್ಲಿನ ಕೆಲವು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರೌಡಿಗಳ ಜತೆ ಶಾಮೀಲಾಗಿ ಏನೆಲ್ಲಾ ನಡೆಸುತ್ತಿದ್ದಾರೆ ಎಂಬುದು ಗೊತ್ತಿದೆ. ನಾಳೆ ಹೆಚ್ಚು ಕಡಿಮೆ ಆದರೆ ಪೊಲೀಸ್ ಇಲಾಖೆಯೇ ಜವಾಬ್ದಾರಿ ಹೊರಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಮುಸ್ಲಿಂ ಹುಡುಗರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಎಸ್‌ಪಿ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅದಕ್ಕೆಲ್ಲ ಇನ್ನುಮುಂದೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್‌ಗೆ ಒಕ್ಕೂಟದ ಬೆಂಬಲ
ಇದೇ ವೇಳೆ ಮಾತನಾಡಿದ ದಲಿತ-ಮುಸ್ಲಿಂ ಒಕ್ಕೂಟದ ಎಚ್.ಆರ್ ಪ್ರಸಾದ್, ರಾಷ್ಟ್ರ, ರಾಜ್ಯ ಮತ್ತು ಜಿಲ್ಲೆಯಲ್ಲಿ ಕೋಮುವಾದಿ ಪಕ್ಷವನ್ನು ದೂರ ಇಡುವ ನಿಟ್ಟಿನಲ್ಲಿ ದಲಿತ-ಮುಸ್ಲಿಂ ಒಕ್ಕೂಟ ಸರ್ವಾನುಮತದಿಂದ ಜೆಡಿಎಸ್ ಬೆಂಬಲಿಸುತ್ತಿದೆ ಎಂದು ಘೋಷಣೆ ಮಾಡಿದರು.
ದಲಿತ-ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ ಎಚ್.ಎಸ್ ಪ್ರದೀಪ್, ಉಪಾಧ್ಯಕ್ಷ ಇಮ್ರಾನ್ ಪಾಷಾ, ಮೌಲ್ವಿ ಇಫ್ತೆಕಾರ್, ಇರ್ಷಾದ್ ಅಹಮ್ಮದ್ ದೇಸಾಯಿ ಸೇರಿ ನೂರಾರು ಕಾರ್ಯಕರ್ತರು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net