

ಧಾರವಾಡ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಆರೋಪಿಸಿ, ಅವರ ಉಚ್ಚಾಟನೆಗೆ ಆಗ್ರಹಿಸಿದ್ದ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ.
ಮಾ. 12ರಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಶಿವಾನಂದ ಮುತ್ತಣ್ಣವರ, ರಾಜ್ಯ ಉಪ ಚುನಾವಣೆ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಏರ್ಪಾಟಾಗಿದ್ದ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿದ್ದ ವಿಡಿಯೋ ವೈರಲ್ ಆಗಲು ಟೆಂಗಿನಕಾಯಿ ಕಾರಣ ಎಂದು ಆರೋಪಿಸಿದ್ದರು. ಇದಲ್ಲದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರಿಂದ ಅವರನ್ನು ಉಚ್ಚಾಟನೆ ಸಹ ಮಾಡಬೇಕು ಎಂದು ಆಗ್ರಹಿಸಿದ್ದರು.
ಇದೀಗ ಶಿವಾನಂದ ಮುತ್ತಣ್ಣವರ ಅವರನ್ನು ಪಕ್ಷದಿಂದ ಅಮಾನತು ಮಾಡಿ ಹು-ಧಾ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಆದೇಶ ಹೊರಡಿಸಿದ್ದಾರೆ. ಪಕ್ಷದ ಆಂತರಿಕ ವಿಷಯಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ನಿಯಮ ಹಾಗೂ ಶಿಸ್ತು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ತಕ್ಷಣದಿಂದಲೇ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಅರವಿಂದ ಬೆಲ್ಲದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.