

ಹನೂರು: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮ ಆಡಳಿತ ನೀಡುತ್ತಿದೆ. ಈ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್.ದತ್ತೇಶ್‌ಕುಮಾರ್ ತಿಳಿಸಿದರು.
ತಾಲೂಕಿನ ಕೌದಳ್ಳಿ, ಕುರಟ್ಟಿ ಹೊಸೂರು, ಶೆಟ್ಟಳ್ಳಿ ಹಾಗೂ ಮಾರ್ಟಳ್ಳಿಯಲ್ಲಿ ಶನಿವಾರ ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಡವರು, ದೀನದಲಿತರು, ರೈತರು ಹಾಗೂ ಹಿಂದುಳಿದವರ ಪರ ಹಲವು ಉತ್ತಮ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಜನಮನ್ನಣೆಗಳಿಸಿದೆ. ಹಾಗಾಗಿ ಬಿಜೆಪಿ ಸರ್ಕಾರದ ಬಗ್ಗೆ ಜನತೆಯಿಂದ ಉತ್ತಮ ಸ್ಪಂದನೆ ಇದೆ. ಆದ್ದರಿಂದ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಉದ್ಧೇಶದಿಂದ ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯ ಸಲುವಾಗಿ ಕಾರ್ಯಕರ್ತರ ಮನೆಯ ಮೇಲೆ ಪಕ್ಷದ ಬಾವುಟವನ್ನು ಹಾರಿಸುವುದರ ಮೂಲಕ ಬೂತ್ ವಿಜಯ ಅಭಿಯಾನವನ್ನು ಆರಂಭಿಸಲಾಗಿದೆ. ಆದ್ದರಿಂದ ಕಾರ್ಯಕರ್ತರು ಈ ಬಗ್ಗೆ ಅಗತ್ಯ ಶ್ರಮವಹಿಸಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ವೀರಭದ್ರ, ಪ್ರಧಾನ ಕಾರ್ಯದರ್ಶಿಗಳಾದ ಮಂಜು, ನವೀನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅನಿಲ್, ಶಿವಕುಮಾರ್, ಒಬಿಸಿ ಮೋರ್ಚಾ ಅಧ್ಯಕ್ಷ ರವಿ, ಮಹಿಳಾ ಅಧ್ಯಕ್ಷೆ ಮೀನಾ, ವಿಸ್ತರಕರಾದ ದಿಲೀಪ್, ಮುಖಂಡರಾದ ಕೌದಳ್ಳಿಯ ಕೃಷ್ಣ, ನಜರುಲ್ಲಾ, ವೆಂಕಟಾಚಲ, ರವಿ, ಕುರಟ್ಟಿಹೊಸೂರಿನ ಮುನಿಸಿದ್ದ, ಪುಟ್ಟರಾಜು, ನಟರಾಜು, ಮಾರ್ಟಳ್ಳಿಯ ಸಿಂಗರಾಯ, ಪುಟ್ಟಸ್ವಾಮಿ, ಗಣೇಶ್, ಮುರುಗೇಶ್, ಮಹದೇವಸ್ವಾಮಿ ಹಾಗೂ ಇನ್ನಿತರರಿದ್ದರು.