ಬಿಜೆಪಿಯಿಂದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ನಾಶ

2
Published on

ಮೈಸೂರು: ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.


ನಗರ ಕಾಂಗ್ರೆಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವರುಣ ವಿಧಾನಸಭಾ ಕ್ಷೇತ್ರದ ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಗಳ ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಮೂರು ಹಂತದ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿ ಸ್ಥಳೀಯ ಜನರಿಗೆ ಅಧಿಕಾರ ನೀಡಿದರು. ಅಧಿಕಾರ ವಿಕೇಂದ್ರೀಕರಣದಿಂದಾಗಿ ಲಕ್ಷಾಂತರ ನಾಯಕರು ರಾಜಕೀಯವಾಗಿ ಬೆಳೆಯಲು ಸಾಧ್ಯವಾಯಿತು. ಆದರೆ, ಈಗಿನ ಬಿಜೆಪಿ ಸರ್ಕಾರ ಅಧಿಕಾರವನ್ನು ಏಕೀಕೃತ ವ್ಯವಸ್ಥೆ ತರಲು ಹೊರಟಿದೆ ಎಂದು ಕಿಡಿಕಾರಿದರು.


ಬಿಜೆಪಿ ಸ್ಥಳೀಯ ಸಂಸ್ಥೆಗಳ ಬಲ ತುಂಬುವ ಕೆಲಸ ಮಾಡಲಿಲ್ಲ. ಜಿಲ್ಲಾ, ತಾಲೂಕು ಪಂಚಾಯಿತಿ ಅಧಿಕಾರ ಮುಗಿದು ವರ್ಷಗಳೇ ಕಳೆದರೂ ಚುನಾವಣೆ ನಡೆಸಿಲ್ಲ. ಆದ್ದರಿಂದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಗಳ ಸಮಿತಿ ಪದಾಧಿಕಾರಿಗಳು ಗ್ರಾಮಾಂತರ ಪ್ರದೇಶದಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದರು.


ಅಭಿವೃದ್ಧಿ ಕೆಲಸಕ್ಕಿಂತ ಬಿಜೆಪಿ ಹಿಂದುತ್ವವನ್ನು ತೇಲಿ ಬಿಟ್ಟು ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿ ಸಮಾಜ ಹೊಡೆದಾಡುವ ಕೆಲಸ ಮಾಡುತ್ತಿದೆ. ನರೇಂದ್ರ ಮೋದಿ ಸರ್ಕಾರ ದೇಶದ ಅಭಿವೃದ್ಧಿಗಿಂತ ಬೇರೆ ಬೇರೆ ವಿಚಾರಗಳಿಗೆ ಒತ್ತು ನೀಡುತ್ತಿರುವುದರಿಂದ ಭಾರತದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆಯೂ ಈಡೇರಿಲ್ಲ. ಬದಲಿಗೆ ಇರುವ ಉದ್ಯೋಗವನ್ನೂ ಹಾಳು ಮಾಡಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯದಲ್ಲಿ 3 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜನಪರ ಯೋಜನೆಗಳನ್ನು ನಿಲ್ಲಿಸಿ ಅನುದಾನವನ್ನು ಕಡಿತಗೊಳಿಸಿದೆ. ಎಸ್‌ಸಿ-ಎಸ್‌ಟಿ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಅನುದಾನವನ್ನೂ ಕಿತ್ತುಕೊಂಡಿದೆ. ಇದು ಶ್ರೀಮಂತರು, ಮೇಲ್ವರ್ಗದವರ ಪರವಾಗಿ ಇದೆಯೇ ಹೊರತು ಬಡವರ ಪರ ಇಲ್ಲ ಎಂದು ಕಿಡಿಕಾರಿದರು.


ಕೇಂದ್ರ, ರಾಜ್ಯದ ಸರ್ಕಾರದ ವೈಫಲ್ಯವನ್ನು ಪ್ರತಿ ಮನೆಗೂ ಕಾಂಗ್ರೆಸ್ ಕಾರ್ಯಕರ್ತರು ತಲುಪಿಸಬೇಕು. ಪಕ್ಷದಲ್ಲಿ 17 ರೀತಿಯ ಸಂಘಟನೆಗಳು ಇದ್ದು, ಜವಾಬ್ದಾರಿ ಹೊತ್ತಿರುವ ಪದಾಧಿಕಾರಿಗಳು ಸಂಘಟನೆಗೆ ಊರೂರಲ್ಲಿ ಕೆಲಸ ಮಾಡಬೇಕು. ಬಿಜೆಪಿ, ಇತರ ಪಕ್ಷಗಳ ನಾಯಕರು ಮಾಡುವ ಅಪಪ್ರಚಾರಕ್ಕೆ ಪ್ರತ್ಯುತ್ತರ ನೀಡಬೇಕು ಎಂದರು.


ವರುಣ ಕ್ಷೇತ್ರದ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಸಮಿತಿ ಅಧ್ಯಕ್ಷ ತೇಜು ಸೇರಿದಂತೆ ಇತರ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಮಲ್ಲೇಶ್ ಕೋಟೆ, ಮುಖಂಡರಾದ ರಮೇಶ್ ಮುದ್ದೇಗೌಡ, ರಂಗಸ್ವಾಮಿ, ಹುಣಸೂರು ಬಸವಣ್ಣ, ಹೆಡತಲೆ ನಾಗರಾಜು, ಬಸವರಾಜು ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net