

ಚಿತ್ರದುರ್ಗ: ಬಿಜೆಪಿ ಮುಂದೆ ದೇಶದಲ್ಲಿರುವ ಇನ್ನಿತರೆ ಯಾವುದೇ ಪಕ್ಷ ಬೆಳೆಯಬಾರದೆಂಬ ಕಾರಣಕ್ಕೆ ವಿವಿಧ ರೀತಿಯ ತಂತ್ರಗಾರಿಕೆ ನಡೆಸಿ ಕಟ್ಟಿಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಭಾನುವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
ದೆಹಲಿ ಸಿಎಂ ಅರವಿಂದ ಕ್ರೇಜಿವಾಲ್ ಬಂಧನ ವಿರೋಧಿಸಿ, ಬಿಡುಗಡೆಗೆ ಆಗ್ರಹಿಸಿ ಧರಣಿ ನಡೆಸಿದರು. ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಬಿಜೆಪಿ ಅಧಿಕಾರದ ಅವಧಿಯಲ್ಲಿ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ. ಬಡವರ ಪರ ಯಾವ ಕೆಲಸ ಮಾಡದೆ, ದೇಶದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು, ಶ್ರೀಮಂತರಿಗಾಗಿ ಕಾನೂನು ರೂಪಿಸಿ ನೆರವಾಗುತ್ತಿದೆ ಎಂದು ದೂರಿದರು.
ಸಂವಿಧಾನ ತಿರುಚುವ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೆ, ಅಂಗ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಬಿಜೆಪಿ ಹೊರಟಿದೆ. ಕೇಜ್ರಿವಾಲ್ ಬಂಧನದಿಂದ ಕಾರ್ಯಕರ್ತರಿಗೆ ಅಸಮಾಧಾನವಾಗಿದೆ ಎಂದರು.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಎಎಪಿ ಬದಲು ಬಿಜೆಪಿಯ ವ್ಯಕ್ತಿ ಮೇಯರ್ ಆಗುವಂತೆ ಮಾಡಿದ್ದಾರೆ. ಮನಬಂದಂತೆ ಆಡಳಿತ ನಡೆಸುತ್ತಿರುವುದು ಎಷ್ಟು ಸರಿ ಎಂದು ಜಗದೀಶ್ ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣ ಚಿತ್ರದುರ್ಗ ಕ್ಷೇತ್ರಕ್ಕೆ ಎಎಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಹೀಗಾಗಿ ಕೈ ಅಭ್ಯರ್ಥಿಗೆ ನಮ್ಮ ಪಕ್ಷದ ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಪ್ರಚಾರಕ್ಕೆ ಕರೆದರೆ, ಹೋಗಲು ಸಿದ್ಧರಿದ್ದೇವೆ ಎಂದು ಜಗದೀಶ್ ತಿಳಿಸಿದರು.
ಮಹಿಳಾ ಅಧ್ಯಕ್ಷೆ ಜ್ಯೋತಿ, ಪದಾಧಿಕಾರಿಗಳಾದ ಮಲ್ಲಿಕಾರ್ಜನಪ್ಪ, ರಾಮಪ್ಪ, ಲೋಕೇಶ್, ಕುಬೇಂದ್ರಪ್ಪ, ತನ್ವೀರ್, ವೀರಣ್ಣ, ವಸಂತಾ, ವಿನೋದಮ್ಮ, ಲೋಕೇಶ್ವರಪ್ಪ, ಅಕ್ಬರ್, ಸುಧಾಕರ್, ಹೇಮಣ್ಣ ಇತರರಿದ್ದರು.