ಬಿಜೆಪಿಯವರೇ ಮೇಯರ್-ಉಪಮೇಯರ್

h12- BJP Bijawad
Published on

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸತತ 3ನೇ ಬಾರಿ ಅಧಿಕಾರ ಗದ್ದುಗೆ ಹಿಡಿಯಲು ಸಜ್ಜಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 82 ಸ್ಥಾನಗಳ ಪೈಕಿ 39 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ. ಶಾಸಕರು, ಸಂಸದರು ಸೇರಿ ಬಿಜೆಪಿಯ ಒಟ್ಟು ಬಲ 45 ಆಗಿದೆ. ಹಾಗಾಗಿ, ಪಕ್ಷಕ್ಕೆ ಸರಳ ಬಹುಮತ ಇದೆ ಎಂದರು.
ಪಾಲಿಕೆ ಚುನಾವಣೆಯ ಟಿಕೆಟ್ ನೀಡುವ ಸಂದರ್ಭದಲ್ಲಿ ಒಂದಿಷ್ಟು ಸಮಸ್ಯೆಯಾಗಿತ್ತು. ಆದರೆ, ಈಗ ಪಕ್ಷೇತರರೂ ನಮ್ಮ ಸಂಪರ್ಕದಲ್ಲಿದ್ದಾರೆ. ಈ ಮೊದಲು ಶಶಿ ಬಿಜವಾಡ ಅವರು ಪಕ್ಷದ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಈಗ ಪುನಃ ಅವರು ಹಾಗೂ 69ನೇ ವಾರ್ಡ್​ನಲ್ಲಿ ಗೆದ್ದಿರುವ ಅವರ ಪತ್ನಿ ದುರ್ಗಮ್ಮ ಅವರು ಸೆ. 13ರಂದು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದರು.
ಉಚ್ಚಾಟನೆ ತೆರವು: ಚುನಾವಣೆಗೆ ಮುಂಚೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜವಾಡ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಇದೀಗ ಅವರು ಪಕ್ಷ ಸೇರುತ್ತಿರುವುದರಿಂದ ಉಚ್ಚಾಟನೆ ತೆರವು ಮಾಡಲಾಗಿದೆ. ಇದೇ ರೀತಿ ಬಂಡಾಯ ಅಭ್ಯರ್ಥಿಯಾಗಿದ್ದವರು ಪಕ್ಷವನ್ನು ಸಂರ್ಪಸಿದರೆ ಆಯಾ ವಾರ್ಡ್​ನ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಚ್ಚಾಟನೆ ತೆರವುಗೊಳಿಸುವ ಬಗ್ಗೆ ತೀರ್ವನಿಸಲಾಗುವುದು ಎಂದು ಉತ್ತರಿಸಿದರು.
ವೋಟಿಂಗ್ ಕಡಿಮೆ: ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಿರುವುದು ಕೂಡ ಪಕ್ಷದ ಸಾಧನೆಗೆ ಒಂದಿಷ್ಟು ಅಡೆತಡೆ ಉಂಟು ಮಾಡಿತು. ಇದು ಏಕಾಏಕಿ ಬಂದ ಚುನಾವಣೆ. ಯಾವುದೇ ಪಕ್ಷ ಇದನ್ನು ಬಯಸಿರಲಿಲ್ಲ. ಕರೊನಾ ಹಿನ್ನೆಲೆಯಲ್ಲಿ ನವೆಂಬರ್- ಡಿಸೆಂಬರ್​ವರೆಗೆ ಯಾವುದೇ ಚುನಾವಣೆ ಬೇಡ ಎಂಬ ತೀರ್ವನವನ್ನು ಅಂದಿನ ಸರ್ಕಾರ ಮಾಡಿತ್ತು. ಆದರೂ, ಚುನಾವಣೆ ಆಯೋಗವು ಪಾಲಿಕೆ ಚುನಾವಣೆ ಘೋಷಣೆ ಮಾಡಿತು ಎಂದರು. ವಾರ್ಡ್ ವಿಂಗಡಣೆ ಸಮಸ್ಯೆ ನಮ್ಮ ಕುಟುಂಬಕ್ಕೂ ಆಗಿದೆ. ಸರಿಪಡಿಸುವಂತೆ ಅಧಿಕಾರಿಗಳ ಜತೆ ಮಾತನಾಡಿದರೂ ಪ್ರಯೋಜನ ಆಗಲಿಲ್ಲ. ಈ ಎಲ್ಲ ಸಂಗತಿಗಳಿಂದಾಗಿ ಬಿಜೆಪಿಗೆ ಹಿನ್ನಡೆಯಾಗಿರುವುದು ನಿಜ. ಹಾಗಾಗಿ, ಅಧಿಕಾರ ಗದ್ದುಗೆ ಹಿಡಿಯಲು ಒಂದಿಷ್ಟು ಹೊಂದಾಣಿಕೆ ಅನಿವಾರ್ಯವಾಗಿದೆ ಎಂದರು.
ಚುನಾವಣೆ ಆಯೋಗ ಸ್ವಾಯತ್ತ ಸಂಸ್ಥೆ. ಇದರಲ್ಲಿ ದುರ್ಬಳಕೆ ಎನ್ನುವುದು ಎಲ್ಲಿಂದ ಬರುತ್ತದೆ? ಕಾಂಗ್ರೆಸ್​ನವರು ಸುಮ್ಮನೆ ಟೀಕೆ ಮಾಡುತ್ತಾರೆ ಎಂದರು.
ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ಯಾವ ಅರ್ಥದಲ್ಲಿ ‘ಹಣದ ಆಮಿಷ ಬಂದಿತ್ತು , ಆದರೆ, ತಾನು ಹಣ ಪಡೆದು ಬಿಜೆಪಿಗೆ ಬಂದಿಲ್ಲ, ಅಧಿಕಾರ ಬಯಸಿ ಬಂದಿದ್ದೇನೆ’ ಎಂದು ಹೇಳಿದ್ದಾರೋ ಗೊತ್ತಿಲ್ಲ. ಇದನ್ನು ಅವರನ್ನೇ ಕೇಳಬೇಕು. ಹಣ ಕೊಟ್ಟು ಶಾಸಕರನ್ನು ಖರೀದಿಸುವ ಜಾಯಮಾನ ಬಿಜೆಪಿಯದ್ದಲ್ಲ ಎಂದರು.
ಕೈಗಾರಿಕಾ ಬೆಳವಣಿಗೆ: ಧಾರವಾಡದ ಕೈಗಾರಿಕಾ ಪ್ರದೇಶದಲ್ಲಿ ಕಾರ್ವಿುಕರ ವಸತಿಗಾಗಿ ಮೀಸಲಿಟ್ಟ ಜಾಗವನ್ನು ಬೇರೆ ಉದ್ದೇಶಕ್ಕೆ ನೀಡಬಾರದು ಎಂದು ಹೇಳಿದ ಶೆಟ್ಟರ್ ಅವರು, ಇನ್ವೆಸ್ಟ್ ಕರ್ನಾಟಕ ಸಮ್ಮೇಳನದಲ್ಲಿ ಆಗಿರುವ ಒಪ್ಪಂದದಂತೆ ಎಫ್​ಎಂಸಿಜಿ ಕೆಲವೇ ದಿನಗಳಲ್ಲಿ ಸ್ಥಾಪನೆಯಾಗಲಿದೆ. ಕೆಲ ಬೇಡಿಕೆಗಳ ಬಗ್ಗೆ ಹಣಕಾಸು ಇಲಾಖೆಯಲ್ಲಿ ಪರಿಶೀಲನೆ ನಡೆದಿವೆ ಎಂದರು. ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ, ಉಪಾಧ್ಯಕ್ಷ ದತ್ತಮೂರ್ತಿ ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಶಿವು ಮೆಣಸಿನಕಾಯಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net