ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು

Published on

ಮೈಸೂರು: ಗಲಾಟೆ, ಗದ್ದಲ ಸೃಷ್ಟಿಸುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಅವರಿಗೆ ಸುಳ್ಳೇ ಮನೆದೇವರು. ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬಿಜೆಪಿ ವಿರುದ್ಧ ಹರಿಹಾಯ್ದರು.

ಮಂಡ್ಯದ ಕೆರೆಗೋಡುವಿನಲ್ಲಿ ಧ್ವಜ ಸ್ತಂಭ ತೆರವು ವಿರೋಧಿಸಿ ಬಂದ್ ವಿಚಾರ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಬೆಂಕಿ ಹಚ್ಚಿ, ಆ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಮಂಡ್ಯದ ಜನರು ಮುಗ್ದರು, ಅವರಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಮುಂದಾಗಿದೆ. ಮಂಡ್ಯದ ಜನರನ್ನು ದೂರಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನಾಯಕರು ಮಾಂಸ ತಿಂದು ಸುತ್ತೂರಿಗೆ ತೆರಳಿದ್ದರು ಎಂಬ ಬಿಜೆಪಿಗರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಸುಳ್ಳು, ಅವರು ಮಾಂಸ ತಿಂದಿದ್ದನ್ನು ಬಿಜೆಪಿಗರು ಹೋಗಿ ನೋಡಿದ್ದಾರಾ? ಬಿಜೆಪಿಗರಿಗೆ ಈ ರೀತಿಯ ಸುಳ್ಳು ಹಬ್ಬಿಸೋದು ಬಿಟ್ಟು ಬೇರೇನು ಗೊತ್ತಿದೆ. ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಎಂದು ಅವರು ಬಿಂಬಿಸುತ್ತಾರೆ. ನಿರುದ್ಯೋಗ, ಬಡತನದಂತಹ ವಿಚಾರಗಳು ಬಿಜೆಪಿಗರ ತಲೆಗೆ ಬರುವುದಿಲ್ಲ. ಸುಳ್ಳು ವಿಚಾರಗಳನ್ನು ಮುಂದಿಟ್ಟು ಗಲಾಟೆ ಎಬ್ಬಿಸುವ ಕೆಲಸ ಬಿಜೆಪಿಯದ್ದಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net