

ಮೈಸೂರು: ದಸರಾ ಮಹೋತ್ಸವ ಅರ್ಥಪೂರ್ಣವಾಗಿ ಆಗಬೇಕು, ಯುವ ದಸರಾ ದೊಂಬಿ ಆಗಬಾರದು, ಸರ್ಕಾರ-ಪಕ್ಷದ ದಸರಾವಾಗದೆ, ಸರ್ವಜನಾಂಗದ ದಸರಾ ಆಗಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾರ್ಡಿಂಗ್ ವೃತ್ತದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮಹಿಳೆ ದಸರಾ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಇತ್ತೀಚಿನ ವಿದ್ಯಮಾನಗಳನ್ನು ನೋಡಿದರೆ ನೋವಾಗುತ್ತದೆ. ಬಾನು ಮುಷ್ತಾಕ್ ಉದ್ಘಾಟನೆ ಮಾಡುವುದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಕನ್ನಡದ ಬಾವುಟದ ಬಗ್ಗೆ ಬಾನು ಮುಸ್ತಾಕ್ ಅವರಿಗೆ ಖಂಡಿತವಾಗಿಯೂ ಗೊತ್ತಿಲ್ಲ. ಗೊತ್ತಿದ್ದರೆ ಮಾತನಾಡುತ್ತಿರಲಿಲ್ಲ. ಕನ್ನಡ ಬಾವುಟಕ್ಕೆ ಅನ್ಯಾಯ ಆಗುತ್ತಿದೆ ಎಂದು ಬಿಜೆಪಿ, ಆರ್‌ಎಸ್‌ಎಸ್‌ನವರು ಹೇಳುತ್ತಾರೆ.
ಬಿಜೆಪಿ, ಆರ್‌ಎಸ್‌ಎಸ್‌ನವರು ಯಾವತ್ತಾದರೂ ಕನ್ನಡಕ್ಕಾಗಿ ಹೋರಾಟ ಮಾಡಿದ್ದಾರೆಯೇ? ಜೈಲಿಗೆ ಹೋಗಿದ್ದಾರೆಯೇ? ಇವರೇನೂ ಕನ್ನಡವನ್ನು ಉದ್ಧಾರ ಮಾಡುತ್ತಾರೆಯೇ? ಇಡೀ ರಾಜ್ಯದಲ್ಲಿ ಹಿಂದಿ ಭಾಷೆ ಬೇಡವೇ ಬೇಡ ಎಂದು ಮಾತನಾಡಲಿ ಎಂದು ಸವಾಲು ಹಾಕಿದರು.
ಮೈಸೂರು ದಸರೆಗೆ ಐತಿಹಾಸಿಕ ಹಿನ್ನೆಲೆ ಇದೆ. ಜನರ ದಸರಾ ಆಗಬೇಕು. ಸರ್ಕಾರದ ದರ್ಬಾರ್ ಆಗಬಾರದು. ಪಕ್ಷದ ದಸರಾ ಆಗಬಾರದು, ರೈತರು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಎಲ್ಲ ಪಕ್ಷದ ಸದಸ್ಯರು ಸಮಿತಿಯಲ್ಲಿ ಇರಬೇಕು ಎಂದು ಹೇಳಿದರು.
ಚಾಮುಂಡೇಶ್ವರಿ ದರ್ಶನ ವ್ಯಾಪಾರ ಆಗಬಾರದು. ಬ್ಲಾೃಕ್ ಮಾರುಕಟ್ಟೆ ಆಗಬಾರದು. ದಸರಾ ಗೋಲ್ಡ್ ಕಾರ್ಡ್ 8 ಸಾವಿರ ರೂ. ಕೊಟ್ಟು ಎಲ್ಲಿ ನೋಡಲು ಆಗುತ್ತದೆ. ಚಾಮುಂಡಿಬೆಟ್ಟದ ನಂದಿ ರಸ್ತೆ ಇನ್ನೂ ದುರಸ್ತಿ ಆಗಿಲ್ಲ. ಮೈಸೂರು ನಗರದ ರಸ್ತೆಗಳು ಹಾಳಾಗಿವೆ ಎಂದು ಕಿಡಿಕಾರಿದರು.
ಯುವ ದಸರಾ ಬಹಳ ಗಂಭೀರವಾಗಿರಬೇಕು. ಕಲಾವಿದರು ನೂರಕ್ಕೆ ನೂರರಷ್ಟು ಕನ್ನಡಿಗರು ಇರಬೇಕು. ಚಾಮರಾಜನಗರವನ್ನು ದಸರಾದಿಂದ ಕೈ ಬಿಟ್ಟಿದ್ದಾರೆ. ಚಾಮರಾಜನಗರ ಮೈಸೂರು ಒಟ್ಟಿಗೆ ಇತ್ತು. ಅರಮನೆಗೂ ಚಾಮರಾಜನಗರಕ್ಕೂ ಸಂಬಂಧ ಇದೆ. ಅಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು ಎಂದು ಆಗ್ರಹಿಸಿದರು.
ಪಾರ್ಥಸಾರಥಿ ಇತರರಿದ್ದರು.