

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ವಕ್ಪ್ ಆಸ್ತಿ ವಿಚಾರವಾಗಿ ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಪ್ ಆಸ್ತಿ ಹಾಗೂ ಮಠಗಳ ಆಸ್ತಿ ರಾಷ್ಟ್ರೀಕರಣ ಮಾಡಿ ಎನ್ನುವುದು ತುಂಬಾ ಅಪಾಯಕಾರಿ. ನಾವು ಮಾತನಾಡಲು ಆರಂಭಿಸಿದರೆ, ಇವರು (ಬಿಜೆಪಿ) ಏನೇನು ಮಾಡಿದ್ದಾರೆ ಎಂದು ಎಲ್ಲವನ್ನೂ ಹೇಳಬೇಕಾಗುತ್ತದೆ. ವಕ್ಪ್ ಆಸ್ತಿ ವಿಚಾರವಾಗಿ ಮೊದಲು ಪತ್ರ ಬರೆದಿದ್ದು ಬಿಜೆಪಿಯವರು. ಇದೀಗ ಚುನಾವಣೆ ಎಂದು ನಾಟಕ ಮಾಡುತ್ತಿದ್ದಾರೆ. ಕೇವಲ ಹಿಂದು ರೈತರು ಅಲ್ಲ, ಮುಸ್ಲಿಂ ರೈತರ ಜಮೀನಿಗೂ ನೋಟಿಸ್ ಕೊಡಲಾಗಿದೆ. ಗದಗ ಜಿಲ್ಲೆಯಲ್ಲಿ ಯಾರಿಗೂ ನೋಟಿಸ್ ಕೊಟ್ಟಿಲ್ಲ ಎಂದರು.