

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಮೂಲ ಬಿಜೆಪಿಗರು ಹಾಗೂ ಈ ಹಿಂದೆ ಬಿಜೆಪಿಗೆ ಬೆಂಬಲ ನೀಡಿದ ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ಹಗ್ಗ ಜಗ್ಗಾಟ ಮುಂದುವರಿದಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಮೂರನೇ 20 ತಿಂಗಳ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ತಹಸೀಲ್ದಾರರು ಜುಲೈ 9ರಂದು ಚುನಾವಣೆ ನಡೆಸಲು ಸೂಚನೆ ಹೊರಡಿಸಿದ್ದು, ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.
ಸದ್ಯ ಬಿಜೆಪಿಯ ರಾಮಚಂದ್ರ ಜಾಧವ ಅಧ್ಯಕ್ಷರಾಗಿದ್ದು, ಮುಂದಿನ ಅವಧಿಗೆ ಬಿಜೆಪಿ ಬೆಂಬಲಿತರಾದ ಬಸವರಾಜ ನಾಯ್ಕರ್, ಶಂಕರಪ್ಪ ಬಿಜವಾಡ, ಸಹದೇವಪ್ಪ ಸುಡಕೇನವರ, ಉದಯ ದೊಡಮನಿ ಅವರು ಪ್ರಯತ್ನ ನಡೆಸಿದ್ದಾರೆ. ಒಟ್ಟು ಏಳು ಬಿಜೆಪಿ ಬೆಂಬಲಿತ ಸದಸ್ಯರು, ಮೂವರು ನಾಮನಿರ್ದೇಶಿತ ಸದಸ್ಯರ ಬೆಂಬಲದೊಂದಿಗೆ ಸುಲಭವಾಗಿ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಗರು ಇದ್ದಾರೆ. ಆದರೆ, ಈ ಹಿಂದೆ ಬಿಜೆಪಿ ಅಭ್ಯರ್ಥಿಗೆ ಬೆಂಬಲವಾಗಿ ನಿಂತಿದ್ದ, ಪಕ್ಷೇತರರಾಗಿ ಗುರುತಿಸಿಕೊಂಡಿರುವ ಸುರೇಶ ಕಿರೇಸೂರ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ಮುಂದುವರಿಸಿದ್ದಾರೆ. ಬಿಜೆಪಿ ಮುಖಂಡರೊಬ್ಬರ ಬೆಂಬಲದೊಂದಿಗೆ ವರಿಷ್ಠರ ಭೇಟಿಗೆ ಮುಂದಾಗಿರುವ ಇವರು ತಮಗೊಂದು ಅವಕಾಶ ನೀಡಲು ಕೋರಿದ್ದಾರೆ ಎನ್ನಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಬಿಜೆಪಿ ವರಿಷ್ಠರು ಎಪಿಎಂಸಿ ಸದಸ್ಯರು, ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಮೂಲ ಬಿಜೆಪಿ ಸದಸ್ಯರು ಎಪಿಎಂಸಿ ಆಡಳಿತ ಬಿಟ್ಟು ಕೊಡಬಾರದು. ಪಕ್ಷನಿಷ್ಠರಿಗೆ ಅವಕಾಶ ನೀಡಬೇಕು ಎಂದು ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ. ಅದೇ ರೀತಿ ಪಕ್ಷೇತರ ಸದಸ್ಯ, ತಮಗೆ ಈ ಹಿಂದೆ ಭರವಸೆ ನೀಡಿದಂತೆ ಈಗ ಅವಕಾಶ ಕಲ್ಪಿಸಲು ಕೇಳಿದ್ದಾರೆ. ಮೂಲ ಬಿಜೆಪಿಗರು ಅಂದುಕೊಂಡಂತೆ ಎಲ್ಲವೂ ನಡೆದರೆ ಬಸವರಾಜ ನಾಯ್ಕರ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯರು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಿರಾಸಕ್ತಿ: ಇನ್ನು ಕಾಂಗ್ರೆಸ್ನಲ್ಲಿ ಅಂತಹ ಪೈಪೋಟಿ ನಡೆದಿಲ್ಲ. ಈಗಾಗಲೇ ಕಾಂಗ್ರೆಸ್ ಬೆಂಬಲಿತರಾದ ಜಗನ್ನಾಥಗೌಡ ಸಿದ್ದನಗೌಡ್ರ, ಈಶ್ವರ ಕಿತ್ತೂರ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಸಹಕಾರ ಸಂಸ್ಥೆಗಳಿಂದ ಆಯ್ಕೆಯಾಗಿರುವ ಮಂಜುನಾಥ ಮುದರಡ್ಡಿ, ರಘುನಾಥ ಕೆಂಪಲಿಂಗನಗೌಡ್ರ ಅವರಿಗೆ ಸ್ಪರ್ಧೆಗೆ ಅವಕಾಶ ಇಲ್ಲ. ಹಾಗಾಗಿ ಕಾಂಗ್ರೆಸ್ನಿಂದ ಬಹುತೇಕ ನಾಮಪತ್ರ ಪ್ರಕ್ರಿಯೆ ಇರುವುದಿಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಪಕ್ಷೇತರರಾಗಿ ಗುರುತಿಸಿಕೊಂಡಿರುವ ನಾಲ್ಕೈದು ಸದಸ್ಯರು ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಲು ಮುಂದೆ ಬಂದರೆ ಅವರಿಗೆ ಬೆಂಬಲ ನೀಡುವುದಾಗಿ ಪಕ್ಷದ ಸದಸ್ಯರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ: ಜುಲೈ 9ರಂದು ಬೆಳಗ್ಗೆ 10ರಿಂದ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 12ರ ತನಕ ನಾಮಪತ್ರ ಸಲ್ಲಿಸಬಹುದು. ಮಧ್ಯಾಹ್ನ 2 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, 2.15ರಿಂದ 2.30ರ ತನಕ ನಾಮಪತ್ರ ವಾಪಸ್ಗೆ ಅವಕಾಶ ಇರುತ್ತದೆ. 2.30ಕ್ಕೆ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.