ಬಿಜೆಪಿಯಲ್ಲಿ ಇದ್ದೇನೆ: ತೇಜಸ್ವಿನಿ ಅನಂತ್‌ಕುಮಾರ್

IMG_6246
Published on

ಮೈಸೂರು; ನಾನು ಬಿಜೆಪಿಯಲ್ಲಿದ್ದು, ಸೈದ್ಧಾಂತಿಕವಾಗಿ ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿದ್ದೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್ ಹೇಳಿದರು.


ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅನಂತ್‌ಕುಮಾರ್ ಅವರು ಕಟ್ಟಿ ಬೆಳೆಸಿದ ಪಕ್ಷ. ಅವರ ಅನುಪಸ್ಥಿತಿಯಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆ ಇದು. ನಾನು ಪಕ್ಷದ ಜತೆಗೆ ಇದ್ದೇನೆ, ಪಕ್ಷವೂ ನನ್ನ ಜತೆಗೆ ಇದೆ. ಇದನ್ನು ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ ಮತ್ತು ಪಕ್ಷದ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.


ಸೂಕ್ತ ವ್ಯಕ್ತಿ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಯಾರೋ ಏನೋ ಮಾತನಾಡುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ನಾವು ಹೇಳಿದ ವಿಷಯ ಒಂದಾದರೆ, ಗುರಿ ತಲುಪುವ ವೇಳೆಗೆ ಅದು ಬೇರೆ ರೀತಿ ಬದಲಾಗಿರುತ್ತದೆ ಎಂದರು.


ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಪಕ್ಷದ ವೇದಿಕೆಯಲ್ಲಿ ನಿರಂತರ ಚರ್ಚೆಯಾಗುತ್ತಿದೆ. ಬದಲಾವಣೆ ನಿರಂತರವಾಗಿ ನಡೆಯುತ್ತಿರಬೇಕು. ಸೋಲು-ಗೆಲುವು ಜೀವನದ ಅವಿಭಾಜ್ಯ ಅಂಗ. ಇದರಿಂದ ಪಾಠ ಕಲಿಯುವುದು ಮುಖ್ಯ. ಖಂಡಿತವಾಗಿಯೂ ಬದಲಾವಣೆ ಮಾಡಿ ಗೆಲುವಿನ ನಡೆಗೆ ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಅನಂತ್‌ಕುಮಾರ್ ಹಾದಿಯಲ್ಲಿ ಹೋಗುತ್ತಿದ್ದು, ಯಾವುದೇ ಆಕಾಂಕ್ಷೆ ಇಟ್ಟುಕೊಂಡು ರಾಜಕಾರಣ ಮಾಡಬಾರದು. ಹಿಂದೇಯೂ ನಾನು ಅವಕಾಶ ಕೇಳಿಲ್ಲ, ಈಗಲೂ ಕೇಳಲ್ಲ. ನೀರಿಕ್ಷೆಗಳನ್ನು ಇಟ್ಟುಕೊಂಡಿಲ್ಲ. ಅವಕಾಶ ಕೊಟ್ಟರೆ ನೋಡೋಣ. ಎಲ್ಲದಕ್ಕೂ ಸಮಯ ಉತ್ತರ ಕೊಡಲಿದೆ ಎಂದು ಹೇಳಿದರು.


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿ ಸೌಹಾರ್ದಯುತವಾದದ್ದು. ದೆಹಲಿಗೆ ಬರುವಂತೆ ಚುನಾವಣಾ ಪ್ರಚಾರದ ವೇಳೆ ಆಹ್ವಾನ ನೀಡಿದ್ದರು. ಬಹಳ ದಿನದ ನಂತರ ಭೇಟಿಯಾಗಿದ್ದೇನೆ. ಬೇರೆ ಬೇರೆ ವಿಚಾರದಲ್ಲಿ ರಾಜಕಾರಣದಲ್ಲಿ ಚರ್ಚೆಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net