ಬಿಜೆಪಿಯನ್ನು ಸೋಲಿಸಿ ಪ್ರಗತಿಪರರು ಮೈಮರೆಯಬಾರದು

1
Published on

ಮೈಸೂರು; ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಪ್ರಗತಿಪರರು ಮೈಮರೆಯಬಾರದು. ಕೋಮುವಾದದ ವಿರುದ್ಧ ಹೋರಾಟವನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಹೇಳಿದರು.

ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಂಗಾಯಣದ ಶ್ರೀರಂಗದಲ್ಲಿ ಭಾನುವಾರ ಆಯೋಜಿಸಿದ್ದ ‘ವಿಚಾರವಾದಿ ಪ್ರೊ.ಕೆ.ರಾಮದಾಸ್ ನೆನಪಿನಲಿ…’ ಸಂವಾದ, ಪುಸ್ತಕ ಬಿಡುಗಡೆ, ಲೇಖನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

1983ರ ವಿಧಾನಸಭೆ ಚುನಾವಣೆಗೂ 2023ರ ವಿಧಾನಸಭೆ ಚುನಾವಣೆಗೂ ಸಾಮ್ಯತೆ ಇದೆ. ಪ್ರಗತಿಪರರ ಒಗ್ಗಟ್ಟಿನ ಫಲವಾಗಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಈ ಕಾರಣಕ್ಕೆ ಸಂಭ್ರಮಿಸುತ್ತಿರುವ ಪ್ರಗತಿಪರರು ಎಚ್ಚರಿಕೆ ವಹಿಸಬೇಕು. ಪ್ರೊ.ಕೆ.ರಾಮದಾಸ್ ಈಗ ಇದ್ದಿದ್ದರೆ ಸಂಭ್ರಮಿಸಿ ಮತ್ತೊಂದು ಹೋರಾಟಕ್ಕೆ ಸಜ್ಜಾಗುತ್ತಿದ್ದರು ಎಂದರು.

ವಿವಿಧ ಚಳವಳಿಗಾರರು, ಪ್ರಗತಿಪರರು ಸೇರಿಕೊಂಡು 1983ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ, ಜನತಾಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದರು. ಬಳಿಕ ಪ್ರಗತಿಪರರೆಲ್ಲ ಮೈಮರೆತರು. ಅದರ ಫಲವಾಗಿ ಇಡೀ ಚಳವಳಿ ಪತನಗೊಂಡಿತ್ತು. ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ರೈತ, ದಲಿತ ಚಳವಳಿಯನ್ನು ಧ್ವಂಸಗೊಳಿಸಿದರು. ಈವರೆಗೂ ಚಳವಳಿಗಳು ಚೇತರಿಸಿಕೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಮುಂಚೂಣಿ ನಾಯಕರು ದಾರಿ ತಪ್ಪಬಾರದು:
1983ರಲ್ಲಿ ಇದ್ದದ್ದು ರಾಮಕೃಷ್ಣ ಹೆಗಡೆ, ಈಗಿರುವುದು ಸಿದ್ದರಾಮಯ್ಯ. ಇವರು ಪ್ರಾಮಾಣಿಕರು, ಸೈದ್ಧಾಂತಿಕೆ ಬದ್ಧತೆ ಇರುವವರು. ಆದರೆ ಸಿದ್ದರಾಮಯ್ಯ ಪ್ರತಿನಿಧಿಸುವ ಪಕ್ಷಕ್ಕೆ ಪ್ರಾಮಾಣಿಕತೆ ಇದೆಯೇ? ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರುವಾಗ ಹೇಗೆ ಕಾಂಗ್ರೆಸ್ ಒಳಗಿನವರೇ ವಿರೋಧಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಚಳವಳಿಯ ಮುಂಚೂಣಿ ನಾಯಕರು ದಾರಿ ತಪ್ಪಬಾರದು ಎಂದು ಎಚ್ಚರಿಸಿದರು.

ವಿಧಾನಸಭೆ ಚುನಾವಣಾ ಫಲಿತಾಂಶ ಕೋಮುವಾದದ ವಿರುದ್ಧ ಜಯವೇ? ನಿಜಕ್ಕೂ ಅಲ್ಲ. ಬೆಲೆ ಏರಿಕೆ, ನಿರುದ್ಯೋಗ ವಿರುದ್ಧ ಹಾಕಿರುವ ಮತ ಅದು. ಸಂಕಷ್ಟಕ್ಕೆ ಸಿಲುಕಿಸಿದ್ದ ಪಕ್ಷದ ವಿರುದ್ಧ ಜನಸಾಮಾನ್ಯರು ಸಿಡಿದೆದ್ದಿದ್ದರು. ಆದರೆ ಈ ಚುನಾವಣೆಯಲ್ಲಿ ಕೋಮುವಾದದ ವಿರುದ್ಧ ಪ್ರಗತಿಪರು ಮಾಡಿದ ಹೋರಾಟ ನಗಣ್ಯವೆಂದು ಹೇಳಲ್ಲ, ಅವರ ಪಾತ್ರವೂ ಇದೆ. ಆದರೆ ಕೋಮುವಾದದ ವಿರುದ್ಧ ಮತವಲ್ಲ, ಅದು ಮುಗಿಯದ ಟಾಸ್ಕ್. ಅದಕ್ಕಾಗಿ ನಿರಂತರವಾಗಿ ಹೋರಾಟವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

ಕೋಮುವಾದದ ವಿರೋಧಿ ಹೋರಾಟವನ್ನು ಅಷ್ಟಕ್ಕೆ ಸೀಮಿತಗೊಳಿಸಬಾರದು. ಬೆಲೆ ಏರಿಕೆ, ನಿರುದ್ಯೋಗ, ಅಲ್ಪಸಂಖ್ಯಾತರ ಅಭದ್ರತೆ, ಸಾಮಾಜಿಕ ಸಮಸ್ಯೆಯೊಂದಿಗೆ ಈ ಹೋರಾಟದ ನೆಲೆ-ದಾರಿಯನ್ನು ವಿಸ್ತರಣೆ ಮಾಡಿಕೊಳ್ಳಬೇಕು. ಇದಕ್ಕೆ ಸ್ಥಳೀಯ ನಾಯಕತ್ವ ಬೆಳೆಸಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಪ್ರಗತಿಪರರನ್ನು ನಿಗಮ-ಮಂಡಳಿ ಅಧಿಕಾರಕ್ಕಾಗಿ ಟವಲ್ ಹಾಕಿರುವ ಗಂಜಿ ಗಿರಾಕಿಗಳೆಂದು ಹೇಳುವುದು ದ್ರೋಹದ ಕೆಲಸ. ಇದು ಸಣ್ಣ ಮನಸ್ಸಿನವರ ಪ್ರಕ್ರಿಯೆಯಷ್ಟೇ. ಬಿಜೆಪಿ, ಆರ್‌ಎಸ್‌ಎಸ್ ಜನರನ್ನು ಈ ಸ್ಥಾನಕ್ಕೆ ನೇಮಿಸಲು ಸಾಧ್ಯವೇ? ಹಾಗಾದರೆ ಯಾರನ್ನು ನೇಮಿಸಬೇಕು? ಸರ್ಕಾರದೊಂದಿಗೆ ಅಂತಹವರನ್ನು ಇಟ್ಟುಕೊಂಡು ಪ್ರಗತಿಪರರು ಕೆಲಸ ಮಾಡಬೇಕು. ಈ ಹಿಂದೆಯೂ ಈ ರೀತಿ ಕೆಲಸವಾಗಿದೆ ಎಂದರು.
ಅಂಬೇಡ್ಕರ್, ಕುವೆಂಪು, ಲಂಕೇಶ್, ತೇಜಸ್ವಿ ಅವರೆಲ್ಲ ಈಗ ಇರಬೇಕಿತ್ತೆಂದು ಬಹಳಷ್ಟು ಜನರು ಹೇಳುತ್ತಾರೆ. ಆದರೆ ಅವರು ಅವರ ಕೆಲಸ ಮಾಡಿ ಹೋಗಿದ್ದಾರೆ. ನಾವು ಏನು ಮಾಡಿದ್ದೇವೆ? ನಮ್ಮ ಕೆಲಸ ಏನು ಎಂದು ಪ್ರಶ್ನಿಸಿದರು.

ಬಿಡುಗಡೆಗೊಂಡ ‘ಒಲವೇ ನಮ್ಮ ಬದುಕು’ ಕುರಿತು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿದರು. ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ, ಚಿಂತಕ ರುದ್ರಪ್ಪ ಹನಗವಾಡಿ, ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net