

ಧಾರವಾಡ: ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ ಸತತ 2ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. 23,857 ಮತ ಗಳಿಸಿರುವ ಅವರು, 11,409 ಮುನ್ನಡೆಯೊಂದಿಗೆ ಭರ್ಜರಿ ಜಯ ದಾಖಲಿಸಿದ್ದಾರೆ.
ಬಿಜೆಪಿಗೆ ಕಾಂಗ್ರೆಸ್ನ ಡಾ. ಆರ್.ಎಂ. ಕುಬೇರಪ್ಪ ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಸವಾಲಾಗಿದ್ದರು. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಂತೆ ಕಂಡುಬಂದಿತ್ತು. ಆದಾಗ್ಯೂ ಸಂಕನೂರ, ಪ್ರಥಮ ಪ್ರಾಶಸ್ಱದ ಮತಗಳೊಂದಿಗೆ ಗೆಲುವಿನ ನಗೆ ಬೀರಿದರು.
ಭಾರಿ ಅಂತರ: ಚಲಾವಣೆಯಾಗಿದ್ದ 52,041 ಮತಗಳಲ್ಲಿ ಗೆಲ್ಲುವ ಅಭ್ಯರ್ಥಿ 21,636 ಮೊದಲ ಪ್ರಾಶಸ್ಱದ ಮತ ಗಳಿಸಬೇಕಿತ್ತು. ಎಸ್.ವಿ. ಸಂಕನೂರ 23,857 ಮತ ಗಳಿಸುವ ಮೂಲಕ ಪ್ರಥಮ ಪ್ರಾಶಸ್ಱದಲ್ಲೇ ಗೆಲುವು ಸಾಧಿಸಿದರು. ಇನ್ನು ಕಾಂಗ್ರೆಸ್ನ ಡಾ. ಆರ್.ಎಂ. ಕುಬೇರಪ್ಪ 12,448 ಮತ ಗಳಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತರಾದರು. ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ 6,188 ಮತ ಪಡೆದು 3ನೇ ಸ್ಥಾನ ಪಡೆದರು.
ಸಂಕನೂರ ಅವರು ಪ್ರತಿಸ್ಪರ್ಧಿ ಪಡೆದ ಮತಕ್ಕಿಂತಲೂ ಭಾರಿ ಅಂತರ ಸಾಧಿಸಿದ್ದಲ್ಲದೇ ನಿಗದಿತ ಪ್ರಥಮ ಪ್ರಾಶಸ್ಱದ ಮತಕ್ಕಿಂತಲೂ ಸಾಕಷ್ಟು ಮುಂದೆ ಇದ್ದರು.
ಕಣದಿಂದ ಹಿಂದೆ ಸರಿದರೂ ಮತ: ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಶಿವಶಂಕರ ಕಲ್ಲೂರ ಕಣದಿಂದ ಹಿಂದೆ ಸರಿದಿದ್ದರೂ 102 ಮತ ಪಡೆದರು. ಆರಂಭದಲ್ಲಿ ಸಾಕಷ್ಟು ಪ್ರಚಾರ ಮಾಡಿದ್ದ ಅವರು, ಕಾರಣಾಂತರಗಳಿಂದ ಹಿಂದೆ ಸರಿದಿದ್ದಾಗಿ ತಿಳಿಸಿದ್ದರು. ಜೆಡಿಎಸ್ ಮುಖಂಡರು ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರಗೆ ಬೆಂಬಲಿಸಿದ್ದರು. ಶಿವಶಂಕರ ಕಲ್ಲೂರ ತಟಸ್ಥರಾದರೂ ಅವರಿಗೆ 102 ಜನ ಪದವೀಧರರು ಅವರಿಗೆ ಪ್ರಥಮ ಪ್ರಾಶಸ್ಱದ ಮತ ಚಲಾಯಿಸಿದ್ದಾರೆ.
8,772 ಕುಲಗೆಟ್ಟ ಮತ!: ಚಲಾವಣೆಯಾಗಿದ್ದ 52,041 ಮತಗಳಲ್ಲಿ 11 ಅಭ್ಯರ್ಥಿಗಳು 43,269 ಮತ ಗಳಿಸಿದ್ದಾರೆ. ಉಳಿದ 8,772 ಮತಗಳು ಅಸಿಂಧುವಾಗಿವೆ. ಪದವೀಧರರೇ ಮತದಾರರಾಗಿರುವ ಕ್ಷೇತ್ರದಲ್ಲಿ ಅಸಿಂಧು ಮತಗಳು ತೃತೀಯ ಸ್ಥಾನ ಪಡೆದಂತಾಗಿದೆ!. ಜಿಲ್ಲಾಡಳಿತ ಮತ ಚಲಾವಣೆಯ ಬಗ್ಗೆ ಸಾಕಷ್ಟು ಪ್ರಚಾರ ಮಾಡಿತ್ತು. ಆದರೂ ಶಿಕ್ಷಿತರು ಬೇಕಾಬಿಟ್ಟಿ ಮತ ಚಲಾಯಿಸಿದ್ದರಿಂದ ಮತಗಳು ಕುಲಗೆಟ್ಟಿವೆ. ಅಭ್ಯರ್ಥಿಯ ಹೆಸರಿನ ಮುಂದೆ ಇಂಗ್ಲಿಷ್ ಅಥವಾ ರೋಮನ್ ಅಂಕಿಯನ್ನು ಬಳಸಿ ಪ್ರಾಶಸ್ಱ ಬರೆಯಲು ಸೂಚಿಸಲಾಗಿತ್ತು. ಆದರೆ ಕೆಲವರು ಸ್ಟಾರ್ ಮಾರ್ಕ್ ಬರೆದರೆ ಮತ್ತೆ ಕೆಲವರು ಪಾಸ್ ಮಾರ್ಕ್ ಹಾಕಿದ್ದು ಕಂಡುಬಂತು. ಅಭ್ಯರ್ಥಿಗಳು ತಮ್ಮ ಕ್ರಮಾಂಕ ಹೇಳಿ ಪ್ರಚಾರ ಮಾಡಿದ್ದರು. ಅದನ್ನೇ ತಲೆಯಲ್ಲಿಟ್ಟುಕೊಂಡಿದ್ದ ಮತದಾರರು ತಮಗೆ ಬೇಕಾದ ಅಭ್ಯರ್ಥಿಗಳ ಹೆಸರಿನ ಮುಂದೆ ಕ್ರಮಾಂಕ ಅಂಕಿಯನ್ನು ಬರೆಯುವ ಮೂಲಕವೂ ಮತಗಳು ಅಸಿಂಧುವಾಗಿವೆ.
ಬಿಜೆಪಿ ಸರ್ಕಾರದ ಸಾಧನೆ, ಹಿಂದಿನ 6 ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮತದಾರರು ಮೆಚ್ಚಿದ್ದಾರೆ. ಮತ್ತೊಂದು ಅವಧಿಗೆ ಆಯ್ಕೆ ಮಾಡಿದ್ದು ಮತದಾರರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಗೆಲುವಿಗೆ ಶ್ರಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದಗಳು. | ಎಸ್.ವಿ. ಸಂಕನೂರ ಗೆದ್ದ ಅಭ್ಯರ್ಥಿ
ಚುನಾವಣಾ ವೀಕ್ಷಕಿ ಗರಂ: ಎಣಿಕೆ ಕೇಂದ್ರಕ್ಕೆ ಹಾಜರಾಗುತ್ತಿದ್ದ ಚುನಾವಣಾ ವೀಕ್ಷಕರ ಕಾರು ತಡೆದ ಪೊಲೀಸರ ವಿರುದ್ಧ ಗರಂ ಆದ ಘಟನೆ ನಡೆಯಿತು. ಚುನಾವಣಾ ವೀಕ್ಷಕಿ ಶಾಲಿನಿ ರಜನೀಶ ಅವರು, ಸ್ಟ್ರಾಂಗ್ ರೂಮ್ ತೆರೆಯುವ ವೇಳೆ ಹಾಜರಾಗಲು ತೆರಳುತ್ತಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಗೇಟ್ನಲ್ಲಿಯೇ ಅವರ ಕಾರು ತಡೆದರು. ಅಧಿಕಾರಿಗಳ ಈ ಯಡವಟ್ಟಿಗೆ ಗರಂ ಆದ ಶಾಲಿನಿ ರಜನೀಶ, ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರಿಗೆ ದೂರವಾಣಿ ಕರೆ ಮಾಡಿ, ತಮಗೆ ಆದ ಅವಮಾನದ ಬಗ್ಗೆ ಗರಂ ಆದರು. ಮತ ಎಣಿಕೆ ಕೇಂದ್ರದ ಒಳಗೆ ಬಂದ ನಂತರ ಪ್ರಭಾರ ಡಿಸಿಪಿ ಪಿ. ಕೃಷ್ಣಕಾಂತ ಅವರನ್ನು ತರಾಟೆಗೆ ತೆಗೆದುಕೊಂಡರು.</