

ಬಳ್ಳಾರಿ : ಬಿಜೆಪಿ ನಾಯಕರ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲವೇ ?. ಯಾರು ಕೂಡ ಜಾಮೀನು ಮೇಲೆ ಓಡಾಡುತ್ತಿಲ್ಲವೇ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರಶ್ನಿಸಿದರು.
ನಗರದ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಪ್ರಕರಣದಿಂದ ಕಾಂಗ್ರೆಸ್ ಸರ್ಕಾರ ಪತನವಾಗುತ್ತಿದೆ ಎಂದು ಬಿಜೆಪಿ ಹಗಲು ಕನಸು ಕಾಣುತ್ತಿದ್ದು ಸಾಧ್ಯವಿಲ್ಲ. ರಾಜ್ಯದ ಜನರು ನಮಗೆ ಪೂರ್ಣ ಬೆಂಬಲ ನೀಡಿದ್ದು, ಸುಭ್ರದ್ರವಾಗಿ ಆಡಳಿತ ನಡೆಯುತ್ತಿದೆ. ಸದ್ಯಕ್ಕೆ ವಿದ್ಯುತ್ ದರ ಏರಿಕೆಯ ಪ್ರಸ್ತಾಪವಿಲ್ಲ, ಈಗಾಗಲೇ ಉತ್ತಮ ಮಳೆ ಸುರಿಯುತ್ತಿರುವುದರಿಂದ ರಾಜ್ಯ ವಿದ್ಯುತ್ ಘಟಕಗಳಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ರಾಜ್ಯದಲ್ಲಿಯೂ ಬಳಕೆ ಮಾಡಿ ಬೇರೆ ರಾಜ್ಯಕ್ಕೆ ಮಾರಾಟ ಮಾಡುವಷ್ಟು ವಿದ್ಯುತ್‌ಯಿದೆ. ಮೈಸೂರಿನ ಮುಡಾ ಹಗರಣ ಬಿಜೆಪಿ ಅಧಿಕಾರದ ವೇಳೆ ಆಗಿದೆ. ಆದರೆ, ಈಗ ಬಿಜೆಪಿಯೆ ಪ್ರತಿಭಟಿಸುತ್ತಿದೆ. ಮುಡಾ ವಿಚಾರಣೆ ನಡೆಯುತ್ತಿದ್ದು, ವರದಿ ಬರುವರರೆಗೂ ಕಾಯಬೇಕು ಎಂದರು. ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ವಿದ್ಯುತ್ ದರ ಏರಿಕೆ ಮಾಡಿತ್ತು. ಈಗ ನೂರು ಸುಳ್ಳು ಹೇಳಿ, ಅದನ್ನು ಸತ್ಯ ಮಾಡುವುದಕ್ಕೆ ಹೊರಟಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಬಿಜೆಪಿಗೆ ಮಾತ್ರ ಬೇಕಿದೆ ಎಂದು ತೀರುಗೇಟು ನೀಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಸರ್ಕಾರ ಎಸ್‌ಐಟಿ ತನಿಖೆ ಆರಂಭಿಸಿದ್ದು, ವರದಿ ಬರುವರವರೆಗೂ ಕಾಯೋಣ, ಬಂದ ಬಳಿಕ ಯಾರೇ ತಪ್ಪಿಸ್ಥರ ಆಗಲಿ ಕ್ರಮವಹಿಸಲಾಗುವುದು. ತನಿಖೆಗೆ ಸರ್ಕಾರ ಸಂಪೂರ್ಣ ಬೆಂಬಲ ಸೂಚಿಸಿದ್ದು, ಹಸ್ತಕ್ಷೇಪ ಮಾಡುತ್ತಿಲ್ಲ. ಸುಖಾಸುಮ್ಮನೆ ಬಿಜೆಪಿ ಈ ಹಗರಣವನ್ನು ರಾಜಕೀಯ ಮಾಡುತ್ತಿದೆ. ತನಿಖೆಯನ್ನು ಸಿಬಿಐಗೆ ವಹಿಸಲು, ರಾಜ್ಯದ ಅಧಿಕಾರಿಗಳು ಏನು ದಕ್ಷರ ಅಲ್ಲವೇ ಎಂದು ಖಾರವಾಗಿ ಉತ್ತರಿಸಿದರು. ಕಳೆದ ವರ್ಷ ಮಳೆಗಾಲದ ಕೊರತೆ ನಡುವೆಯೂ ರೈತರಿಗೆ ಏಳು ತಾಸು ವಿದ್ಯುತ್ ಒದಗಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಕೆಲವೊಂದು ವಿದ್ಯುತ್ ಸಮಸ್ಯೆಗಳಿದ್ದು, ಎಂಜನಿಯರ್‌ಗಳು ಕಾರ್ಯ ಪ್ರವೃತ್ತರಾಗಬೇಕು. ಅಲ್ಲದೆ, ಅಕ್ರಮ ಹಾಗೂ ಸಕ್ರಮ ವಿದ್ಯುತ್ ಲೈನ್ ಅಳವಡಿಕೆಯಿಂದ ವಿದ್ಯುತ್ ಕೊರತೆಯಿಂದ ಕೆಲ ಟ್ರಾನ್ಸ್‌ಫಾರಮ್‌ಗಳು ಹಾಳಾಗುತ್ತಿದ್ದು, ಅಕ್ರಮಗಳ ಬಗ್ಗೆ ಗಮನಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಳ್ಳಾರಿ ಹಾಗೂ ರಾಯಚೂರು ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಎಸ್‌ಸಿ, ಎಸ್‌ಟಿಯ ಟಿಎಸ್‌ಪಿ ಹಾಗೂ ಎಸ್‌ಎಸ್‌ಪಿ ಹಣವನ್ನು ಬಳಕೆ ಮಾಡಿಕೊಂಡಿಲ್ಲ. ಎಲ್ಲ ಘಟಕಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ರಿವ್ಯೆವ್ ಮೀಟಿಂಗ್ ನಡೆಸಲಾಗುವುದು ಎಂದು ಹೇಳಿದರು.
ಪ್ರಮುಖರಾದ ಶಾಸಕರಾದ ಬಿ.ಎಂ.ನಾಗರಾಜ, ಜೆ.ಎನ್. ಗಣೇಶ, ಡಿಸಿ ಪ್ರಶಾಂತ ಕುಮಾರ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಎಡಿಸಿ ಮೊಹಮ್ಮದ್ ಝಬೈರ್ ಇದ್ದರು.
ಬಾಕ್ಸ್ : ನಗರ ಶಾಸಕ ನಾರಾಭರತರೆಡ್ಡಿ, ಸಂಸದ ಈ. ತುಕರಾಮ್ ಅವರು ಅನ್ಯ ಕಾರ್ಯಕ್ರಮದ ನಿಮಿತ್ತ ಸಭೆಗೆ ಗೈರಾಗಿದ್ದರು. ವಾಲ್ಮೀಕಿ ಹಗರಣ ಎದುರಿಸುತ್ತಿರುವ ಶಾಸಕ ಬಿ.ನಾಗೇಂದ್ರ ಬೆಂಗಳೂರಿನಲ್ಲಿದ್ದು, ಉಳಿದ ಶಾಸಕರು ಸಭೆಗೆ ಹಾಜರು ಇದ್ದರು.