ಬಿಜೆಪಿಯ ಜನವಿರೋಧಿ ಕಾಯ್ದೆ ವಾಪಸ್ ಪಡೆಯಿರಿ

CAN_7058
Published on

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತರ ವಿರೋಧಿ ಕಾಯ್ದೆಗಳನ್ನು ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ವಾಪಸ್ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಜನರು ಬಹಳ ವಿಶ್ವಾಸ, ನಂಬಿಕೆ ಇರಿಸಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಹೀಗಾಗಿ, ಅವರ ಆಶೋತ್ತರ ಈಡೇರಿಸುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಚುನಾವಣೆ ವೇಳೆ ರೈತ, ಪ್ರಗತಿಪರ, ದಲಿತ ಸಂಘಟನೆಗಳು ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ತಮ್ಮದೇ ರೀತಿಯಲ್ಲಿ ಕೆಲಸ ಮಾಡಿವೆ. ರೈತ ಸಮುದಾಯದ ವಿರುದ್ಧ ಇರುವ ಬಿಜೆಪಿ ಸರ್ಕಾರದ ವಿರುದ್ಧ ಪ್ರಚಾರ ಮಾಡಲಾಗಿದ್ದು, ಅದು ಮತ್ತೆ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಶ್ರಮಪಟ್ಟಿದ್ದಾರೆ. ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಂಡು ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ವಾಪಸ್ ಪಡೆದು ರೈತ ಸ್ನೇಹಿ ನೀತಿ ಅನುಸರಿಸಬೇಕು ಎಂದು ಹೇಳಿದರು.

2013ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಎಲ್ಲರ ಒತ್ತಾಯದ ಮೇರೆಗೆ ಕೃಷಿ ಬೆಲೆ ನೀತಿ ಆಯೋಗ ರಚಿಸಿದ್ದರು. ಈಗ ಇದಕ್ಕೆ ಕಾನೂನಿನ ಮಾನ್ಯತೆ ನೀಡಬೇಕು. ಅದು ಕಾಲಕಾಲಕ್ಕೆ ನೀಡುವ ವರದಿ ಗಂಭೀರವಾಗಿ ಪರಿಗಣಿಸಬೇಕು. ಸದ್ಯದಲ್ಲೇ ರೈತ ಸಂಘದ ನಿಯೋಗ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸಲಿದೆ ಎಂದು ತಿಳಿಸಿದರು.

ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ ಅವರ ಆಯ್ಕೆಗೆ ಸಹಕರಿಸಿದ ಮೇಲುಕೋಟೆ ಜನತೆಗೆ ಧನ್ಯವಾದ ಸಲ್ಲಿಸಿದರು. ಮುಖಂಡರಾದ ಹೊಸಕೋಟೆ ಬಸವರಾಜು, ನಾಗನಹಳ್ಳಿ ವಿಜೇಂದ್ರ, ಮಂಡಕಳ್ಳಿ ಮಹೇಶ್, ಪಿ.ಮರಂಕಯ್ಯ, ಪ್ರಸನ್ನ ಎನ್. ಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net