

ದಾವಣಗೆರೆ: ಬಿಜೆಪಿಗೆ 'ಹಿಂದುತ್ವ, ರಾಷ್ಟ್ರೀಯತೆ'ಯೇ ಆತ್ಮ. ಆದರೆ, ಜೆಡಿಎಸ್‌ಗೆ 'ಜಾತಿ'ಯೇ ಪ್ರಧಾನವಾಗಿದೆ. ಕಾಂಗ್ರೆಸ್‌ಗೆ ಅದರ ಪರಿವಾರವೇ ಆತ್ಮವಾಗಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟೀಕಿಸಿದರು.
ನಗರದ ಪೂಜಾ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಶನಿವಾರ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿಣಿ ಹಾಗೂ ಮೂರು ದಿನಗಳ ಪ್ರಶಿಕ್ಷಣ ಉದ್ಘಾಟಿಸಿ ಮಾತನಾಡಿದರು.
ನೆಹರು ಪರಿವಾರ ಕಾಂಗ್ರೆಸ್‌ಗೆ, ದೊಡ್ಡ ಗೌಡರು ಜೆಡಿಎಸ್‌ಗೆ ಮಾಲೀಕರಾದರೆ, ಬಿಜೆಪಿಗೆ ಕಾರ್ಯಕರ್ತರೇ ಮಾಲೀಕರು, ನಮ್ಮಲ್ಲಿ ಚಹಾ ಮಾರುವ ಹುಡುಗ ಕೂಡ ಪ್ರಧಾನಿಯಾಗಬಹುದು. ವನವಾಸಿ ಮಹಿಳೆ ರಾಷ್ಟ್ರಪತಿ ಆಗಬಹುದು ಎಂದು ಹೇಳಿದರು.
ನೇತಾರ, ನೀತಿ, ನಿಯತ್ತು ಇವುಗಳ ಆಧಾರದಲ್ಲಿ ಬಿಜೆಪಿ ಬೆಳೆದಿದೆ. ಸ್ವಾತಂತ್ರ್ಯಾನಂತರದ ಕಾಂಗ್ರೆಸ್‌ಗೆ ಯಾವುದೇ ನೀತಿಗಳಿಲ್ಲ. ಬಿಜೆಪಿಗೆ ಗರೀಬಿ ಕಲ್ಯಾಣವೇ ನೀತಿ ಆಗಿದೆ. ದೇಶಾಧರಿತ ಕೆಲಸ ಮಾಡಬೇಕು ಎಂಬುದು ನಮ್ಮ ನಿಯಮ ಎಂದು ತಿಳಿಸಿದರು.
ಜಗತ್ತಿನ ಶೇ. 70 ರಷ್ಟು ಜನರು ಪ್ರಧಾನಿ ಮೋದಿಯವರನ್ನು ವಿಶ್ವನಾಯಕರನ್ನಾಗಿ ಗುರುತಿಸಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ 300ಕ್ಕೂ ಹೆಚ್ಚು ಯೋಜನೆಗಳು ನೇರವಾಗಿ ಜನರಿಗೆ ತಲುಪಿವೆ.ನಿಯತ್ತಿನ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಇದಕ್ಕೆ ಕಾರಣ.
ಅತೀ ಹೆಚ್ಚು ರಫ್ತು ಮಾಡಿದ ದಾಖಲೆ ಭಾರತದ್ದು, ಜಗತ್ತಿನ ಎಲ್ಲ ದೇಶಗಳು ಆರ್ಥಿಕ ಸಂಕಷ್ಟದಲ್ಲಿದ್ದರೂ ಇಂದು ಭಾರತ 5ನೇ ಆರ್ಥಿಕ ಸುಸ್ಥಿರ ದೇಶವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಮಾತನಾಡಿ, ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮುದಾಯ ಒಗ್ಗೂಡಿಸಿ ಕಲಸ ಮಾಡಬೇಕು ಎಂದು ತಿಳಿಸಿದರು. ಸಂಸದ ಜಿ.ಎಂ.ಸಿದ್ದೇಶ್ವರ, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್, ಸತ್ಯನಾರಾಯಣ ರೆಡ್ಡಿ, ಗಂಗಾಧರ್ ನಾಯ್ಕ, ಮಹೇಶ್ ತೆಂಗಿನಕಾಯಿ, ಶಾಸಕರಾದ ಎಸ್.ವಿ ರಾಮಚಂದ್ರ, ಎಸ್.ಎ ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಪ್ರೊ. ಲಿಂಗಪ್ಪ, ಪರಿಷತ್ ಸದಸ್ಯ ನವೀನ್, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಶ್ರೀನಿವಾಸ್ ದಾಸಕರಿಯಪ್ಪ, ಜಗದೀಶ್, ಸುಧಾ ಜಯರುದ್ರೇಶ್ ಇತರರಿದ್ದರು.
....