

ಟೇಕಲ್: ತೀವ್ರ ಕುತೂಹಲ ಕೆರಳಿಸಿದ್ದ ಮಾಲೂರು ತಾಲೂಕಿನ ಕೆಜಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಎಸ್.ಆರ್.ಯಲ್ಲಪ್ಪ, ಮುರಗೇಶ್ ಸಮಬಲದ ಮತಗಳನ್ನು ಪಡೆದು ಕೊನೆಗೆ ಬಿಜೆಪಿ ಬೆಂಬಲಿತ ಸದಸ್ಯ ಎಸ್.ಆರ್.ಯಲ್ಲಪ್ಪ ಅವರು ಲಾಟರಿ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಮಾಲೂರು ತಾಲೂಕಿನ ಕೆಜಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಎಸ್.ಆರ್.ಯಲ್ಲಪ್ಪ ಅವರು ಸೋಮವಾರ
ಕಾಂಗ್ರೆಸ್ ಒಳ ಒಪ್ಪಂದದಂತೆ ಶಾಸಕರ ಸಲಹೆ ಮೇರೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಜಿಲ್ಲಾ ಉಪ ವಿಭಾಗಾಧಿಕಾರಿ ಚುನಾವಣೆ ನಿಗದಿಪಡಿಸಿ ಚುನಾವಣಾ ಅಧಿಕಾರಿಗಳನ್ನು ನೇಮಿಸಿದ್ದರು. ಅದರಂತೆ ಮಂಗಳವಾರ ಕೆಜಿಹಳ್ಳಿ ಗ್ರಾಪಂ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಎಸ್.ಆರ್.ಯಲ್ಲಪ್ಪ ಅವರು ಬಿಜೆಪಿ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ, ಸದಸ್ಯ ಮುರುಗೇಶ್ ಅವರು ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಎಸ್.ಆರ್.ಯಲ್ಲಪ್ಪ ಮತ್ತು ಮುರುಗೇಶ್ ತಲಾ 11 ಮತ ಪಡೆದಿದ್ದರಿಂದ ಚುನಾವಣಾಧಿಕಾರಿ ಮಂಜುನಾಥ್ ಅವರು ಲಾಟರಿ ಪ್ರಕ್ರಿಯೆ ನಡೆಸಿದಾಗ ಎಸ್.ಆರ್.ಯಲ್ಲಪ್ಪ ಅವರ ಹೆಸರು ಬಂದಿದ್ದರಿಂದ ಅಧ್ಯಕ್ಷರಾಗಿ ಆಯ್ಕೆಯಾದರು.
ಶಾಸಕರ ಪ್ರತಿಷ್ಠೆಯ ತವರು ಕ್ಷೇತ್ರವಾದ ಕೆ.ಜಿ.ಹಳ್ಳಿ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮುರುಗೇಶ್ರನ್ನು ಕಣಕ್ಕೆ ಇಳಿಸಿದ್ದರು. ಪರಾಭವಗೊಂಡ ಅಭ್ಯರ್ಥಿ ಮುರುಗೇಶ್ ಮನೆಗೆ ಶಾಸಕ ಕೆ.ವೈ.ನಂಜೇಗೌಡ, ಕಾರ್ಯರ್ತರು ಸಮಾಧಾನ ಪಡಿಸಿದರು.
ಮುಖಂಡರಾದ ಚಿನ್ನಸ್ವಾಮಿಗೌಡ, ಕೆ.ಬಿ.ನಾರಾಯಣಸ್ವಾಮಿ, ಮುನಿಸ್ವಾಮಿಗೌಡ, ಹಳೆಪಾಳ್ಯ, ಮಂಜುನಾಥ್, ಚಂದ್ರಶೇಖರ್, ಸೋಮಣ್ಣ, ಕಿರಣ್, ವಿಜಯ್ ಕುಮಾರ್, ಮುರುಳಿ, ನಾಗರಾಜ್, ಮಂಜುನಾಥ್, ಚಲಪತಿ, ಪಿಡಿಒ ವೆಂಕಟೇಶ್ ಇದ್ದರು.
ಕಿರುಕುಳ ಸಹಿಸದೆ ಕಾಂಗ್ರೆಸ್ ಬಿಟ್ಟೆ: ಮಾಲೂರು ತಾಲೂಕಿನ ಕಾಂಗ್ರೆಸ್ನಲ್ಲಿರುವ ಸರ್ವಾಧಿಕಾರ ಹಾಗೂ ನನ್ನ ಮೇಲೆ ಆಗುತ್ತಿದ್ದ ದೌರ್ಜನ್ಯಗಳನ್ನು ಖಂಡಿಸಿ, ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ನಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದ್ದರೂ ಸಹ ಟೇಕಲ್ ಹೋಬಳಿಯ ಕಾಂಗ್ರೆಸ್ನ ಪ್ರಭಾವಿ ನಾಯಕರಿಂದ ಅವಮಾನ ಮತ್ತು ದೌರ್ಜನ್ಯವಾಗುತ್ತಿರುವ ಕಾರಣ ಬಿಜೆಪಿ ಸಿದ್ಧಾಂತಗಳನ್ನು ಒಪ್ಪಿಕೊಂಡು ಸೇರ್ಪಡೆಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಪಕ್ಷ ಬಲಗೊಳಿಸಲು ಯತ್ನಿಸುವೆ ಎಂದು ಅಧ್ಯಕ್ಷ ಎಸ್.ಆರ್.ಯಲ್ಲಪ್ಪ ತಿಳಿಸಿದರು.