

ಗದಗ: ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್, ಅಟಲ್ ಬಿಹಾರಿ ವಾಜಪೇಯಿ ಅವರ ಗ್ರಾಮ ಸುರಾಜ್ಯ ಕನಸನ್ನು ನನಸು ಮಾಡಲು ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಸಚ್ಚಾರಿತ್ರ್ಯ ಹಾಗೂ ನಾಯಕತ್ವ ಗುಣವುಳ್ಳ ಕಾರ್ಯಕರ್ತರನ್ನು ಗೆಲ್ಲಿಸುವ ಮೂಲಕ ತಳಮಟ್ಟದಲ್ಲಿ ಬಿಜೆಪಿಗೆ ಭದ್ರ ಅಡಿಪಾಯ ಹಾಕಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಬಿಜೆಪಿ ವತಿಯಿಂದ ಭಾನುವಾರ ಆಯೋಜಿಸಿದ್ದ ಗ್ರಾಮ ಸ್ವರಾಜ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ‘ಪಕ್ಷದ ಕಾರ್ಯಕರ್ತರ ಶ್ರಮದಿಂದಲೇ ಇಂದು ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಶೀಘ್ರ ರಾಜ್ಯದಲ್ಲಿ ಕಾರ್ಯಕರ್ತರ ಚುನಾವಣೆ (ಗ್ರಾಪಂ ಚುನಾವಣೆ) ಬರಲಿದ್ದು, ನಿಮ್ಮನ್ನು ಗೆಲ್ಲಿಸಲು ನಾವೂ ಶ್ರಮಿಸುತ್ತೇವೆ. ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರು ಗೆದ್ದು ಬಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರ ಮನೆಮನೆಗೆ ತಲುಪಿಸಬಹುದು’ ಎಂದರು.
ಆಯಾ ಗ್ರಾಮಕ್ಕೆ ಗ್ರಾಮ ಪಂಚಾಯಿತಿಯೇ ವಿಧಾನಸೌಧ. ಹೀಗಿರುವಾಗ ಇಲ್ಲಿ ಅಡಳಿತ ನಡೆಸುವವರು ಬದ್ಧತೆ ಹೊಂದಿರಬೇಕು. ಹೀಗಾಗಿ, ಕಾರ್ಯಕರ್ತರು ಬೂತ್ ಮಟ್ಟದಿಂದ ಪಕ್ಷ ಸಂಘಟನೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಜನರಿಗೆ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದ್ದು, ಅವುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಬಿಜೆಪಿಯ ಶಿಸ್ತು ಸಂಘಟನೆ ನೋಡಿ ಖುಷಿಯಾಗಿದೆ. ಕಾರ್ಯಕರ್ತರನ್ನು ಗೆಲ್ಲಿಸುವ ಗುಣ ಬೇರೆ ಯಾವ ಪಕ್ಷದಲ್ಲೂ ಇಲ್ಲ. ಗ್ರಾಮ ಸ್ವರಾಜ್ ಸಮಾವೇಶದ ಮೂಲಕ ಕಾರ್ಯಕರ್ತರಲ್ಲಿ ಹುರುಪು ಹುಮ್ಮಸ್ಸು ತುಂಬಲಾಗುತ್ತಿದೆ. ಗ್ರಾಮೀಣ ಭಾಗದಲ್ಲೂ ಸಂಘಟನೆ ಆಗಬೇಕು. ತಳಹದಿ ಮತ್ತಷ್ಟು ಗಟ್ಟಿಯಾಗಬೇಕು. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಯೋಜನೆಗಳು ಜನರಿಗೆ ಮುಟ್ಟಬೇಕಾದರೆ ಗ್ರಾಮ ಪಂಚಾಯಿತಿಗಳು ಬಿಜೆಪಿ ತೆಕ್ಕೆಗೆ ಬರಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ 122 ಗ್ರಾಪಂ ಪೈಕಿ 110ರಲ್ಲಿ ಗೆಲುವು ಸಾಧಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಸಿದ್ದರಾಜು, ವಿಪ ಸದಸ್ಯ ಎಸ್.ವಿ.ಸಂಕನೂರ, ಕಾಂತಿಲಾಲ ಬನ್ಸಾಲಿ, ಸುದೀಪ ಮತ್ತಿತರರು ಇದ್ದರು.
ಅನಿಲ ಮೆಣಸಿನಕಾಯಿ ಗದಗನಲ್ಲಿದ್ದರೆ ಹುಲಕೋಟಿ ತಾನಾಗಿಯೇ ಸರಿಯಾಗುತ್ತೆ. ಯಾವ ಗೂಂಡಾಗಿರಿ, ಧಮಕಿ ನಡೆಯಲ್ಲ. ಗದಗನ ಶೆಟ್ರು, ಹುಬ್ಳಿ ಶೆಟ್ರು ಒಂದಾದ್ರೆ ಯಾರ ಆಟವೂ ನಡೆಯಲ್ಲ. ಅದಕ್ಕೂ ಮಿಕ್ಕಿ ಏನಾದರೂ ಭವಿಸಿದರೆ ನಾನಿರುತ್ತೇನೆ. ಧೈರ್ಯದಿಂದ ಮುನ್ನುಗ್ಗಿ. | ಬಸವರಾಜ ಬೊಮ್ಮಾಯಿ ಗೃಹ ಸಚಿವ
ಗದಗ ವಿಧಾನಸಭೆ ಕ್ಷೇತ್ರದ ಕೆಲವೆಡೆ ಕಾಂಗ್ರೆಸ್ ಮುಖಂಡರು ಗೂಂಡಾಗಿರಿ ಮಾಡಿಸಿ ಮತದಾರರನ್ನು ಹೆದರಿಸುತ್ತಾರೆ. ಇದರಿಂದ ಹುಲಕೋಟಿ, ಅಸುಂಡಿ, ಬಿಂಕದಕಟ್ಟಿ, ಅಂತೂರ ಬೆಂತೂರ, ಕುರ್ತಕೋಟಿಯಲ್ಲಿ ಅಭ್ಯರ್ಥಿಗಳೇ ಇಲ್ಲದಂತಾಗುತ್ತದೆ. ಭಯದ ವಾತಾವರಣ ಇರುವುದರಿಂದ ಪಕ್ಷದ ಕಾರ್ಯಕರ್ತರು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕಷ್ಟವಾಗುತ್ತಿದೆ. ಈ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕ್ರಮ ಕೈಗೊಳ್ಳಬೇಕು. | ಅನಿಲ ಮೆಣಸಿನಕಾಯಿ ಬಿಜೆಪಿ ಯುವ ಮುಖಂಡ
ಡಿಸೆಂಬರ್ 15ರೊಳಗೆ ಮತದಾರರ ಪರಿಷ್ಕರಣೆ ನಡೆಯಲಿದ್ದು, ಅರ್ಹರನ್ನು ಮತಪಟ್ಟಿಗೆ ಸೇರಿಸುವ ಮತ್ತು ಅನರ್ಹರನ್ನು ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ಶುರುವಾಗಿದೆ. ನಕಲಿ ಮತದಾರರಿದ್ದರೆ ಅದನ್ನು ಗುರುತಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು. ಕಾರ್ಯಕರ್ತರು ಈ ಕುರಿತು ಹೆಚ್ಚು ಕಾರ್ಯಪ್ರವೃತ್ತರಾಗಬೇಕು. | ಶಿವಕುಮಾರ ಉದಾಸಿ ಸಂಸದ
ಬಿಜೆಪಿಗೆ ಕಾರ್ಯಕರ್ತರೇ ಆಧಾರವಾಗಿದ್ದಾರೆ. ಚುನಾವಣೆಯಲ್ಲಿ ನಾವು ಗೆಲ್ಲಲು ನೀವು ಕಾರಣರಾಗಿದ್ದೀರಿ. ನಿಮ್ಮನ್ನು ಗೆಲ್ಲಿಸಲು ನಾವು ಶ್ರಮಿಸುತ್ತೇವೆ. ಸಚ್ಚಾರಿತ್ರ್ಯುಳ್ಳವರನ್ನು ಕಣಕ್ಕಿಳಿಸಿ ಆಯ್ಕೆ ಮಾಡಬೇಕು. ನಾವು ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ತಲೆ ಹಾಕುವುದಿಲ್ಲ. ಗದಗ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಜಿಲ್ಲೆ ಮಾಡಬೇಕು. ಕಾರ್ಯಕರ್ತರು ಶಕ್ತಿಯಾಗಿ ಬೆಳೆಯಬೇಕು. | ಸಿ.ಸಿ.ಪಾಟೀಲ ಸಚಿವ
ಗೂಂಡಾಗಿರಿಗೆ ಆಸ್ಪದ ನೀಡಲ್ಲ: ಗದಗ: ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಗೃಹ ಇಲಾಖೆಗೆ ಸೂಚಿಸಿದ್ದೇನೆ. ಗೂಂಡಾಗಿರಿ ಮಾಡುವುದು, ಧಮಕಿ ಹಾಕುವುದನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ. ಕಾನೂನು ಉಲ್ಲಂಘಿಸಿದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಖಚಿತ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಗದಗ ಮತಕ್ಷೇತ್ರದ ಹುಲಕೋಟಿ, ಅಸುಂಡಿ, ಬಿಂಕದಕಟ್ಟಿ, ಅಂತೂರ ಬೆಂತೂರ, ಕುರ್ತಕೋಟಿಯಲ್ಲಿ ಗೂಂಡಾಗಿರಿ ಸೇರಿ ಭೂತಕಾಲದ ಯಾವುದೇ ಆಟವನ್ನು ಆಡಲು ಬಿಡುವುದಿಲ್ಲ. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯುವ ಮುಖಂಡ ಅನಿಲ ಮೆಣಸಿನಕಾಯಿ ನೇತೃತ್ವದ ತಂಡದವರು ಪ್ರತಿ ವಾರ್ಡ್ಗೂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರಬೇಕು’ ಎಂದು ತಾಕೀತು ಮಾಡಿದರು. ವಿಪ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿ, ಗದಗನಲ್ಲಿ ಗೂಂಡಾಗಿರಿ ನಡೆಯಲ್ಲ. ಈ ಚುನಾವಣೆಯಲ್ಲಿ ನಾನು ಕೂಡ ಸಕ್ರಿಯವಾಗಿ ಭಾಗವಹಿಸುತ್ತೇನೆ. ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ ಎಂದರು.