

ಹಾಸನ: ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಕರ್ನಾಟಕ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಪರಿಸ್ಥಿತಿಗೂ ಕರ್ನಾಟಕದ ವಿದ್ಯಮಾನಗಳಿಗೂ ಬಹಳ ವ್ಯತ್ಯಾಸ ಇದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಪರ ಆಡಳಿತ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದ್ದು, ಬೆಲೆ ಏರಿಕೆಯಿಂದ ಸಾಮಾನ್ಯ ಜನ ತತ್ತರಿಸುತ್ತಿದ್ದಾರೆ ಎಂದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿಷಯವನ್ನು ಮುಂದಿಟ್ಟುಕೊಂಡು ನಾವು ಚುನಾವಣೆಗೆ ಹೋಗುತ್ತಿದ್ದೇವೆ. ಅಲ್ಲದೆ, ಹಿಂದೆ ಸಿದ್ದರಾಮಯ್ಯನವರು ನೀಡಿದ್ದ ಜನಪರ ಆಡಳಿತವನ್ನು ಮತದಾರರಿಗೆ ನೆನಪಿಸಲಾಗುವುದು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇಬ್ಬರು ಸಮರ್ಥ ನಾಯಕರ ನೇತೃತ್ವದಲ್ಲಿದೆ. ಒಬ್ಬರು ಸಮರ್ಥ ಆಡಳಿತಗಾರರಾದರೆ, ಮತ್ತೊಬ್ಬರು ಉತ್ತಮ ಸಂಘಟಕರಾಗಿದ್ದಾರೆ. ಜೊತೆಗೆ ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಶಕ್ತಿಯೂ ಸೇರುವುದರಿಂದ ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಬೆಂಕಿ ಹಚ್ಚುವುದೊಂದೇ ಕೆಲಸ:
ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಬೆಂಕಿ ಹಚ್ಚುವುದೇ ಕೆಲಸ. ಜನರನ್ನು ಜಾತಿ ಮತ್ತು ಧರ್ಮಗಳಾಗಿ ಒಡೆಯಲು ಮತ್ತು ಅಮಾಯಕರನ್ನು ದಾರಿ ತಪ್ಪಿಸಲು ಸುಳ್ಳು, ಅಪಪ್ರಚಾರದಲ್ಲಿ ತೊಡಗಿದೆ. ಮುಖ್ಯಮಂತ್ರಿ ಆಗಲು ಎಲ್ಲರಿಗೂ ಆಸೆ ಇರುತ್ತದೆ, ಆದರೆ ನಮ್ಮಲ್ಲಿ ಪೈಪೋಟಿ ಇಲ್ಲ. ಚುನಾವಣೆ ನಂತರ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ಕಾಂಗ್ರೆಸ್ ನಾಯಕರಿಗೆ ಪಾಕಿಸ್ತಾನದ ಹುಚ್ಚುನಾಯಕ ಕಚ್ಚಿದೆ ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕೆ ಮಾಡಿರುವ ಕುರಿತು ಗಮನ ಸೆಳೆದಾಗ, ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಭಾಷಣ ಮಾಡಲು ಬಿಜೆಪಿ ನಾಯಕರಿಗೆ ಬರುವುದಿಲ್ಲ. ಹಾಗಾಗಿ ವಿರೋಧ ಪಕ್ಷಗಳ ನಾಯಕರ ತೇಜೋವಧೆ ಮಾಡುವ ಚಾಳಿ ಬೆಳೆಸಿಕೊಂಡಿದ್ದಾರೆ. ಚುನಾವಣೆಗೆ ಮುನ್ನ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ 60 ಭರವಸೆಗಳನ್ನೂ ಈಡೇರಿಸಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯನವರು ಯಾವ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಚಿಂತೆ ಬಿಜೆಪಿ ನಾಯಕರಿಗೆ ಬೇಕಾಗಿಲ್ಲ. ಜನಪ್ರಿಯ ನಾಯಕರು ಎಲ್ಲಿಂದ ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು. ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಬಿಟ್ಟು ಉತ್ತರಪ್ರದೇಶದ ವಾರಾಣಸಿಯಲ್ಲೇಕೆ ಸ್ಪರ್ಧಿಸಿದರು ಎಂಬುದನ್ನು ಬಿಜೆಪಿ ಮುಖಂಡರು ಅರ್ಥ ಮಾಡಿಕೊಳ್ಳಲಿ ಎಂದರು.
ಜಿಲ್ಲೆಯ ಕೆಲ ಶಾಸಕರು ಕಾಂಗ್ರೆಸ್‌ಗೆ?
ಹಾಸನ ಜಿಲ್ಲೆಯ ಕೆಲ ಹಾಲಿ ಶಾಸಕರು ಕಾಂಗ್ರೆಸ್ ಸೇರುವ ಸಂಬಂಧ ಮಾತುಕತೆ ನಡೆದಿದೆ. ಅವರು ಯಾರು ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ. ಎಲ್ಲದಕ್ಕೂ ಸಮಯ ಬಂದಾಗ ಉತ್ತರ ಸಿಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹಾಸನ ಸಮಸ್ಯೆ ಪರಿಹಾರ:
ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ ಕುರಿತಂತೆ ಕೆಲ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ನಮ್ಮ ಕುಟುಂಬದ ಸಮಸ್ಯೆ. ಈ ಕುರಿತು ವರಿಷ್ಠರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ಏನೇ ಇದ್ದರೂ ನಾಲ್ಕು ಗೋಡೆಗಳ ನಡುವೆ ಚರ್ಚಿಸಬೇಕು, ಮಾಧ್ಯಮದ ಮುಂದೆ ಹೋಗಬಾರದು ಎಂಬುದಾಗಿ ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಚನೆ ನೀಡಲಾಗಿದೆ. ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಪಕ್ಷ ಸೇರುವವರೆಲ್ಲ ಕಾಂಗ್ರೆಸಿಗರೇ. ಅವರಲ್ಲಿ ಮೂಲ, ಹೊರಗಿನವರು ಎಂಬ ಭೇದ ಭಾವ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಬಿ. ಶಿವರಾಮು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.