ಬಿಜೆಪಿಗೆ ಪಾಲಿಕೆ ಗೆಲ್ಲುವ ತವಕ

Palike
ಬೆಳಗಾವಿಯ ಮಹಾನಗರ ಪಾಲಿಕೆ ಕಚೇರಿ.
Published on

ಬೆಳಗಾವಿ: ಸೆ. 3ರಂದು ಮಹಾನಗರ ಪಾಲಿಕೆಗೆ ಚುನಾವಣೆ ಜರುಗಲಿದ್ದು, ಕಣ ರಂಗೇರಿದೆ. ಎರಡು ದಶಕಗಳ ಬಳಿಕ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ಈ ಬಾರಿ ಪಕ್ಷದ ಚಿನ್ಹೆಯಡಿ ಸ್ಪರ್ಧಿಸುತ್ತಿದ್ದೆ. ಇದು ಕುಂದಾನಗರಿ ಜನತೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ರಾಷ್ಟ್ರೀಯ ಪಕ್ಷಗಳೂ ಚಿಹ್ನೆಯಡಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿರುವುದರಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ತುಸು ಭಯ ಆವರಿಸಿದೆ. ಬಿಜೆಪಿ- ಕಾಂಗ್ರೆಸ್ ವರ್ಚಸ್ಸು ಹಾಗೂ ನಾಯಕರ ಪ್ರಭಾವದಿಂದ ಮರಾಠಿ ಭಾಷೆಯ ಕೆಲ ್ರಭಾವಿಗಳು ಎಂಇಎಸ್ ತೊರೆದು ಬಿಜೆಪಿ, ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆಗಿಳಿದಿದ್ದಾರೆ. ಇಂತಹವರ ಸಂಖ್ಯೆ ಶೇ. 60ರಷ್ಟಿದೆ.

ಗೌಣವಾದ ಎಂಇಎಸ್: ರಾಷ್ಟ್ರೀಯ ಪಕ್ಷಗಳ ಸ್ಪರ್ಧೆಯಿಂದ ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್‌ಗೆ ಅಷ್ಟೊಂದು ಮಹತ್ವ ಸಿಗುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು, ಜೆಡಿಎಸ್ ಹಾಗೂ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಈ ಎರಡೂ ಪಕ್ಷಗಳ ಬಲ ಅಥವಾ ಅಸ್ತಿತ್ವ ಇಲ್ಲದಿರುವುದರಿಂದ ಗೆಲುವ ಸಾಧಿಸುತ್ತಾರೆ ಎನ್ನುವುದು ಕಷ್ಟ.

ತಟ್ಟಲಿದೆಯೇ ಬಂಡಾಯದ ಬಿಸಿ?: ಬಿಜೆಪಿ-ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಕಾರ್ಯಕರ್ತರ ಮಧ್ಯೆ ಭಿನ್ನಮತ ಸ್ಫೋಟಗೊಂಡಿದ್ದು, ಎರಡೂ ಪಕ್ಷಗಳಲ್ಲಿ ಪ್ರಮುಖ ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿವೆ. ಆ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ ಎಂದು ಪಕ್ಷಗಳ ಮೊಗಸಾಲೆಯಲ್ಲಿ ಗುಸು ಗುಸು ಕೇಳಿ ಬರುತ್ತಿದೆ. ಪಕ್ಷದ ಒಳಗೆ ಇರುವ ಈ ಅಸಮಾಧಾನ, ಒಡಕು ಹಾಗೂ ಭಿನ್ನಾಭಿಪ್ರಾಯಗಳನ್ನು ಜಿಲ್ಲೆಯ ಮುಖಂಡರು ಯಾವ ರೀತಿ ಬಗೆಹರಿಸಿ, ಚುನಾವಣೆ ಎದುರಿಸುತ್ತಾರೆ ಎನ್ನುವುದೂ ಸಹ ಕುತೂಹಲ ಕೆರಳಿಸಿದೆ. ಬಂಡಾಯದ ತೀವ್ರತೆ ಹಾಗೂ ಶಮನದ ಮೇಲೆಯೇ ಫಲಿತಾಂಶ ನಿಂತಿದೆ.

ಕಮಲ ಅಭ್ಯರ್ಥಿಗಳಿಗೆ ಆಗುವುದೇ ವರದಾನ?

ಈ ಬಾರಿಯ ಪಾಲಿಕೆ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಅಭಿವೃದ್ಧಿ ಕೆಲಸಗಳೂ ಸಹ ವೇಗವಾಗಿ ಆಗುತ್ತವೆ ಎಂಬ ಅಭಿಪ್ರಾಯ ಕುಂದಾನಗರಿ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುತ್ತಾರೆಂಬ ವಿಶ್ವಾಸವನ್ನು ಪಕ್ಷದ ನಾಯಕರು ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಬೆಳಗಾವಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪಾಲಿಕೆ ಚುನಾವಣೆಯಲ್ಲಿ 45 ಸ್ಥಾನ ಗೆಲ್ಲುತ್ತೇವೆ. ಈಗಾಗಲೇ ಬೆಳಗಾವಿ ದಕ್ಷಿಣದಲ್ಲಿ 67 ಮತ್ತು ಉತ್ತರ ಮತಕ್ಷೇತ್ರದಲ್ಲಿ 75ಕ್ಕೂ ಹೆಚ್ಚು ಸಭೆ ಮಾಡಿದ್ದೇವೆ. ನಮ್ಮ ಕಾರ್ಯಕರ್ತರು ವಾರ್ಡ್‌ನ ಪ್ರತಿ ಮನೆಗೆ ಹೋಗಿ ಹ್ಯಾಂಡ್‌ಬಿಲ್ ನೀಡಿ ಮತಯಾಚನೆ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಖಂಡಿತವಾಗಿಯೂ ಹೆಚ್ಚು ಸ್ಥಾನ ಗಳಿಸಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ವಿಶ್ವಾಸವಿದೆ.| ಅಭಯ ಪಾಟೀಲ ಶಾಸಕ, ಮಹಾನಗರ ಪಾಲಿಕೆ ಚುನಾವಣೆ ಬಿಜೆಪಿ ಉಸ್ತುವಾರಿಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೂ ‘ಚಿಹ್ನೆಯಡಿ ಸ್ಪರ್ಧೆ ಮಾಡುತ್ತಿದೆ. 25ವರ್ಷಗಳ ಬಳಿಕ ಮತ್ತೆ ಚಿಹ್ನೆಯಡಿ ನಡೆಯುವ ಮೊದಲ ಚುನಾವಣೆ ಇದಾಗಿದೆ. ನಾವು ಪಕ್ಷದ ವತಿಯಿಂದ ಎಲ್ಲ ಸಮಾಜದ ವರ್ಗದ ಜನತೆಗೆ ಟಿಕೆಟ್ ನೀಡಿದ್ದೇವೆ. ಈ ಚುನಾವಣೆಯಲ್ಲಿ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂಬ ವಿಶ್ವಾಸವಿದೆ.| ಸತೀಶ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷ

| ಜಗದೀಶ ಹೊಂಬಳಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net