ಬಿಜೆಪಿಗೆ ನನ್ನ ಕಂಡರೆ ಭಯ: ಸಿದ್ದರಾಮಯ್ಯ

Siddaramayya 2
Published on


ಮೈಸೂರು: ಬಿಜೆಪಿಗೆ ನನ್ನನ್ನು ಕಂಡರೆ ಭಯ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಂದು ಆ ಪಕ್ಷ ಹೆದರಿದೆ. ಅದೇ ಕಾರಣಕ್ಕೆ ನನ್ನ ಜನ್ಮದಿನ ಮುಗಿದು ವಾರ ಕಳೆದರೂ ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಕಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಯದಲ್ಲೇ ಬಿಜೆಪಿಯವರು ಇನ್ನೂ ವ್ಯರ್ಥ ಟೀಕೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮತದಾರರ ಪಟ್ಟಿಯಿಂದ ಅಹಿಂದ ಮತದಾರರ ಹೆಸರುಗಳನ್ನು ತೆಗೆದುಹಾಕುವ ಕೆಲಸ ನಡೆಯುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ವರ್ಗದ ಜನರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಾರೆಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎನಿಸುತ್ತಿದೆ. ಚುನಾವಣೆ ಗೆಲ್ಲಲು ಬಿಜೆಪಿಯವರು ಏನನ್ನು ಬೇಕಾದರೂ ಮಾಡುತ್ತಾರೆ ಎಂದು ಹರಿಹಾಯ್ದರು.

ಹರ್ ಘರ್ ತಿರಂಗಾ ಅಭಿಯಾನ ಮೂಲಕ ಬಿಜೆಪಿ ನಾಯಕರು ನಾಟಕವಾಡುತ್ತಿದ್ದಾರೆ. ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ಬಿಜೆಪಿಗೆ ಗೌರವ ಇಲ್ಲ. ಸ್ವಾತಂತ್ರೃದ ಅಮೃತ ಮಹೋತ್ಸವವನ್ನು ರಾಜಕೀಯ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.

ಸಾವರ್ಕರ್ ಭಾರತದ ತ್ರಿವರ್ಣ ಧ್ವಜವನ್ನು ವಿರೋಧ ಮಾಡಿದ್ದರು. ಆದರೆ ಅವರನ್ನು ಆರ್‌ಎಸ್‌ಎಸ್ ಆರಾಧನೆ ಮಾಡುತ್ತದೆ. ಆರ್‌ಎಸ್‌ಎಸ್ ಸರಸಂಘಚಾಲಕರಾಗಿದ್ದ ಗೋಲ್ವಾಲ್ಕರ್ ಕೂಡ ತ್ರಿವರ್ಣ ಧ್ವಜವನ್ನು ವಿರೋಧ ಮಾಡಿದ್ದರು. ‘ಆರ್ಗನೈಸರ್’ ಎಂಬ ಬಿಜೆಪಿಯ ಮುಖವಾಣಿಯೂ ವಿರೋಧ ಮಾಡಿತ್ತು. ಆದರೆ ಆಗ ವಿರೋಧ ಮಾಡಿ ಈಗ ಹರ್ ಘರ್ ತಿರಂಗಾ ಅಭಿಯಾನ ಮಾಡೋದು ನಾಟಕವಲ್ಲವೇ? ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ಬಿಜೆಪಿಗೆ ಗೌರವ ಇಲ್ಲ. ಸ್ವಾತಂತ್ರೃದ ಅಮೃತ ಮಹೋತ್ಸವವನ್ನು ರಾಜಕೀಯ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.

ನಾವು ಸ್ವಾತಂತ್ರೃದ ಅಮೃತ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುತ್ತಿದ್ದೇವೆ. ಕಾರಣ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಬಿಜೆಪಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೊತ್ತಾ? ಆರ್‌ಎಸ್‌ಎಸ್‌ನವರು ಯಾರಾದ್ರೂ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ರಾ? ಸಂಘದ ಸ್ಥಾಪಕರಾದ ಹೆಡಗೆವಾರ್, ಗೋಲ್ವಾಲ್ಕರ್ ಜೈಲಿಗೆ ಹೋಗಿದ್ರಾ ಎಂದು ಖಾರವಾಗಿ ಪ್ರಶ್ನಿಸಿದರು.

ಚೀನಾದ ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜ ತಯಾರಿಸಿದರೆ ಅದರ ಉದ್ದೇಶವೇ ಹಾಳಾಗುತ್ತದೆ. ರಾಷ್ಟ್ರಧ್ವಜವನ್ನು ಖಾದಿ ಬಟ್ಟೆಯಿಂದ ತಯಾರಿಸಬೇಕು. ಖಾದಿ ಬಟ್ಟೆ ಕೈಮಗ್ಗಗಳಲ್ಲಿ ತಯಾರಾಗುತ್ತದೆ. ಚರಕದಿಂದ ನೂಲು ತೆಗೆಯುವ ಕರಕುಶಲ ಕರ್ಮಿಗಳಿಗೆ ಉದ್ಯೋಗ ಸಿಗಬೇಕು ಎನ್ನುವುದು ಅದರ ಉದ್ದೇಶವಾಗಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚೀನಾದಿಂದ ಆಮದು ಜಾಸ್ತಿಯಾಗಿ, ರಫ್ತು ಕಡಿಮೆಯಾಗಿದೆ. ಮೇಕ್ ಇನ್ ಇಂಡಿಯಾ ಎಂದರೆ ರಫ್ತು ಜಾಸ್ತಿಯಾಗಬೇಕಿತ್ತು. ಹೊರಗಡೆಯಿಂದ ತಂದುಕೊಟ್ಟರೆ ಅದಕ್ಕೆ ಅರ್ಥ ಇರುತ್ತಾ ಎಂದು ವಾಗ್ದಾಳಿ ನಡೆಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಊಹಾಪೋಹ. ಮಾಲೂರು, ಚಿಂತಾಮಣಿ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲೂ ನಾನು ಈ ಹಿಂದೆ ಪಾದಯಾತ್ರೆ ಮಾಡಿದ್ದೆ. ಅಂದಮಾತ್ರಕ್ಕೆ ಈ ಎಲ್ಲ ಕಡೆ ಚುನಾವಣೆಗೆ ನಿಲ್ಲೋಕಾಗುತ್ತಾ? ಚುನಾವಣೆ ಹತ್ತಿರ ಬಂದಾಗ ಯಾವ ಕ್ಷೇತ್ರ ಎಂಬುದನ್ನು ಎಲ್ಲರಿಗೂ ಹೇಳ್ತೇನೆ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net