ಬಿಜೆಪಿಗೆ ದಲಿತರ ಮೇಲೆ ಧೃತರಾಷ್ಟ್ರ ಪ್ರೇಮ

r.druvanarayan
Published on

ಮೈಸೂರು: ಬಿಜೆಪಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ, ಧೃತರಾಷ್ಟ್ರ ಪ್ರೇಮ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಟೀಕಿಸಿದರು.

ಮಹಾಭಾರತದಲ್ಲಿ ಧೃತರಾಷ್ಟ್ರನು ಭೀಮನನ್ನು ನಾಶ ಮಾಡುವ ಉದ್ದೇಶದಿಂದ ಮನದೊಳಗೆ ದ್ವೇಷವನ್ನು ಇಟ್ಟು, ಮೇಲ್ನೋಟಕ್ಕೆ ಪ್ರೀತಿ ತೋರಿಸುತ್ತಾನೆ. ದಲಿತರ ಬಗ್ಗೆ ಬಜೆಪಿಯ ಉದ್ದೇಶವೂ ಇದೇ ಆಗಿದೆ. ದಲಿತರನ್ನು ಅಪ್ಪಿಕೊಳ್ಳುವ ಆಸೆ ತೋರುತ್ತಾ, ಅವರನ್ನು ನಾಶ ಮಾಡಲು ಸಂಚು ರೂಪಿಸುತ್ತಿದೆ. ಚುನಾವಣೆ ಬಂದಾಗ ದಲಿತರನ್ನು ಸ್ಮರಿಸೋದು, ಅಧಿಕಾರಕ್ಕೆ ಬಂದ ಮೇಲೆ ಅವರನ್ನು ಶೋಷಿಸುವುದು ಬಿಜೆಪಿ ಸಂಸ್ಕೃತಿ. ದಲಿತರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿರುವ ಆರೋಪಗಳು ಸವಕಲು ನಾಣ್ಯವಾಗಿದೆ. 40 ವರ್ಷಗಳಿಂದ ಹಳೇ ಕ್ಯಾಸೆಟ್ ಹಾಕಿಕೊಂಡು ಓಡಾಡುತ್ತಿರುವ ಬಿಜೆಪಿ, 9 ವರ್ಷಗಳಲ್ಲಿ ದಲಿತರಿಗೆ ಏನು ಮಾಡಿದೆ? ಅಂಬೇಡ್ಕರ್ ಅಂತ್ಯಕ್ರಿಯೆಗೆ ಕಾಂಗ್ರೆಸ್ ಜಾಗ ಕೊಡಲಿಲ್ಲ ಎಂಬುದು ರಾಜಕೀಯ ಪ್ರೇರಿತ ಆರೋಪ. ಆದರೆ, ಡಾ.ಅಂಬೇಡ್ಕರ್ ಬರೆದ ಸಂವಿಧಾನವನ್ನು ಸಂಪೂರ್ಣವಾಗಿ ಒಪ್ಪಿ, ಅದನ್ನು ಅನುಸರಿಸುವ ಮೂಲಕ ಕಾಂಗ್ರೆಸ್ ಅವರನ್ನು ಶಾಶ್ವತವಾಗಿ ಬದುಕಿಸಿಕೊಳ್ಳುವ ಕೆಲಸ ಮಾಡಿದೆ ಎಂದು ತಿರುಗೇಟು ನೀಡಿದರು.

‘ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆಯಲಿಲ್ಲ’ ಎಂದು ಶಾಲೆ ಪಠ್ಯಕ್ರಮವನ್ನು ಬದಲಿಸಿದವರು ಬಿಜೆಪಿಯವರು. ‘ಸಂವಿಧಾನವನ್ನು ಬದಲಿಸುವುದಕ್ಕೇ ನಾವು ಬಂದಿದ್ದೇವೆ, ಅದನ್ನು ಬದಲಿಸಿಯೇ ತೀರುತ್ತೇವೆ’ ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರನ್ನು ಶಾಶ್ವತವಾಗಿ ಸಾಯಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.


ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳು ಹಾಗೂ ಡಾ.ಅಂಬೇಡ್ಕರ್ ಅವರಿಗೆ ಮಾಡಿರುವ ಸಾಲು ಸಾಲು ಅವಮಾನಗಳು ನಮ್ಮ ಮುಂದಿವೆ. ಬಿಜೆಪಿ ಅಂಬೇಡ್ಕರ್ ಅವರನ್ನು ಒಬ್ಬ ವ್ಯಕ್ತಿಯಾಗಿ ಮಾತ್ರ ನೋಡುತ್ತಿದೆ. ನಾವು ಅವರನ್ನು ಒಂದು ವ್ಯಕ್ತಿತ್ವವಾಗಿ, ಜ್ಞಾನವಾಗಿ ಕಾಣುತ್ತಿದ್ದು, ಕಾಂಗ್ರೆಸ್ ಸಂವಿಧಾನದ ಆಶಯ ಪಾಲಿಸುತ್ತಾ ಅದನ್ನು, ಪ್ರಜಾಪ್ರಭುತ್ವವನ್ನು ಜೀವಂತವಾಗಿ ಇಟ್ಟಿದೆ ಎಂದರು.


ಕಾಂಗ್ರೆಸ್‌ನಿಂದ ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಇಂದಿರಾಗಾಂಧಿ ಜಾರಿಗೆ ತಂದ ಬಡತನ ನಿರ್ಮೂಲನೆ, ಉಳುವವನೇ ಭೂಮಿಯ ಒಡೆಯ ಕಾನೂನನ್ನು ವಿರೋಧಿಸಿದವರು ಯಾರು? ಇಂದು ದಲಿತರ ಭೂಮಿಯನ್ನು ಕಸಿದುಕೊಳ್ಳಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದವರು ಯಾರು? ಮೀಸಲಾತಿ ಪದ್ಧತಿಯನ್ನು ಅರ್ಥಹೀನ ಮಾಡಲು ಖಾಸಗೀಕರಣ ನೀತಿ ಅನುಸರಿಸುತ್ತಿರುವವರು ಯಾರು? ಎಂದು ಪ್ರಶ್ನಿಸಿದರು.


ನಾನೊಬ್ಬ ಅಂಬೇಡ್ಕರ್ ವಾದಿ ಎಂದು ಬಸವರಾಜ ಬೊಮ್ಮಾಯಿ ಹೇಳಿಕೊಂಡಿದ್ದಾರೆ. ಆದರೆ, ಅಂಬೇಡ್ಕರ್ ಆಶಯಗಳನ್ನು ಅವರು ಆಡಳಿತದಲ್ಲಿ ಈಡೇರಿಸಿದ್ದೀರಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕುಟುಕಿದರು.


ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 6,83,823 ಕೇಂದ್ರ ಸರ್ಕಾರಿ ಉದ್ಯೋಗಗಳು ಖಾಲಿ ಇವೆೆ. ಇದರಲ್ಲಿ 2019ರವರೆಗೆ ಎಸ್ಸಿ 1,713, ಎಸ್ಟಿಗೆ ಸೇರಿದ 2,530 ಹುದ್ದೆಗಳು ಖಾಲಿ ಉಳಿದಿವೆ. ಕಳೆದ 3 ವರ್ಷಗಳಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ. ಬಿಜೆಪಿ ಮೊದಲು ಈ ಹುದ್ದೆಗಳನ್ನು ಭರ್ತಿ ಮಾಡಿ ದಲಿತರ ಮೇಲಿನ ಪ್ರೀತಿ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.


ರಾಜ್ಯದಲ್ಲಿ ದಲಿತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿಲ್ಲ. ಇದರಿಂದ ಇವರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಸ್ಟೆಲ್‌ಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಭತ್ಯೆಯನ್ನೂ ಕಡಿತಗೊಳಿಸಲಾಗಿದೆ. ದಲಿತ ಮಕ್ಕಳ ಹಾಸ್ಟೆಲ್‌ಗೆ ಮೀಸಲಾಗಿದ್ದ ಸರ್ಕಾರಿ ಭೂಮಿಯನ್ನು ರಾಷ್ಟ್ರೋತ್ಥಾನ ಸಂಸ್ಥೆಗೆ ಉಚಿತವಾಗಿ ನೀಡಲಾಗಿದೆ ಎಂದು ದೂರಿದರು.


ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಯಾವುದೇ ಸಂವಿಧಾನಿಕ ಮಾನ್ಯತೆ ಇಲ್ಲ. ಜ.31ರವರೆಗೆ ಇದನ್ನು ಕಲ್ಪಿಸಿಕೊಡಬೇಕು. ಇಲ್ಲವಾದರೆ, ಇದು ಬಿಜೆಪಿಯ ಚುನಾವಣಾ ಗಿಮಿಕ್ ಆಗಲಿದೆ ಎಂದು ಟೀಕಿಸಿದರು.
ಸಿ.ಟಿ.ರವಿ ಅವರಿಗೆ ಅಂಬೇಡ್ಕರ್ ಬಗ್ಗೆ ಗೌರವವಿದ್ದರೆ ನಮ್ಮ ದೇಶ ಜಾತ್ಯತೀತ ರಾಷ್ಟ್ರ ಎಂದು ಒಪ್ಪಿಕೊಳ್ಳಲಿ. ಧರ್ಮ-ಧರ್ಮಗಳನ್ನು ಎತ್ತಿ ಕಟ್ಟುವುದು, ದ್ವೇಷದ ವಿಷ ಬೀಜ ಬಿತ್ತುವುದನ್ನು ಬಿಟ್ಟು, ಎಲ್ಲ ಜಾತಿ, ಧರ್ಮಗಳ ಬಗ್ಗೆ ಮಮತೆ, ಕರುಣೆ, ಪ್ರೀತಿ ಬೆಳೆಸಿಕೊಳ್ಳಲಿ ಎಂದರು.


ಮೀಸಲಾತಿ ರಕ್ಷಣಾ ಪಡೆ ಮಾಡಬೇಕೆಂದಿರುವ ಬಿಜೆಪಿಯ ಡಿ.ಎಸ್.ವೀರಯ್ಯ ಹೇಳಿಕೆ ಹಾಸ್ಯಾಸ್ಪದವಾಗಿದೆ. ‘ಬಿಜೆಪಿಯಲ್ಲಿ ಸಿಎಂ ಹುದ್ದೆ ಕೇಳುವ ಕಾಲ ದೂರವಿಲ್ಲ’ ಎಂದು ಛಲವಾದಿ ನಾರಾಯಣಸ್ವಾಮಿ ಹೇಳುವ ಮೂಲಕ ಬಿಜೆಪಿಯಲ್ಲಿ ದಲಿತ ಸಿಎಂ ಹುದ್ದೆ ಕೇಳಲು ಇದು ಸೂಕ್ತ ಸಂದರ್ಭವಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿಯಲ್ಲಿ ದಲಿತರು ಸಿಎಂ ಹುದ್ದೆ ಕೇಳುವ ಕಾಲವೇ ಇನ್ನೂ ಬಂದಿಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net