ಬಿಜೆಪಿಗೆ ದಲಿತ ಸಮುದಾಯ ಬೆಂಬಲ

Published on

ಪಾಂಡವಪುರ: ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ದಲಿತರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ನೀಡಿದ್ದು, ಈ ಚುನಾವಣೆಯಲ್ಲಿ ದಲಿತರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಡಬ ಪುಟ್ಟರಾಜು ತಿಳಿಸಿದರು.

ಕಳೆದ ಏಳು ದಶಕಗಳಿಂದ ಕಾಂಗ್ರೆಸ್ ಪಕ್ಷ ದಲಿತರನ್ನು ಹಂತ ಹಂತವಾಗಿ ನಿರ್ನಾಮ ಮಾಡುವ ಕೆಲಸ ಮಾಡಿಕೊಂಡು ಬಂದಿದೆ. ಪಕ್ಷಕ್ಕೆ ದಲಿತರ ಮತಗಳು ಬೇಕೇ ಹೊರತು ದಲಿತರ ಅಭಿವೃದ್ಧಿ ಬೇಕಿಲ್ಲ. ಅನೇಕರಿಗೆ ಮುಖ್ಯಮಂತ್ರಿ ಹುದ್ದೆ ಹೇರುವ ಸಾಮರ್ಥ್ಯ ಮತ್ತು ಅವಕಾಶಗಳು ಒದಗಿ ಬಂದರೂ ಅವರಿಗೆ ಅಧಿಕಾರ ಸಿಗದಂತೆ ವಂಚಿಸಿತು. ಪಕ್ಷದ ಅನೇಕ ದಲಿತ ನಾಯಕರನ್ನು ಕಾಂಗ್ರೆಸ್ ಮೂಲೆಗುಂಪು ಮಾಡಿ ‘ಹಾವು ಸಾಯಬಾರದು ಕೋಲು ಮುರಿಯಬಾರದು’ ಎಂಬ ಗಾದೆ ಮಾತಿನಂತೆ ನಡೆಸಿಕೊಳ್ಳುತ್ತಿದೆ. ಸಮುದಾಯದ ಏಳಿಗೆಗಾಗಿ ದಲಿತರು ಒಗ್ಗೂಡಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರು ಪರಿನಿಬ್ಬಾಣವಾದ ಸ್ಥಳ, ಹುಟ್ಟಿದ ಸ್ಥಳ, ಬೌದ್ಧ ಧರ್ಮ ಸ್ವೀಕರಿಸಿದ ಸ್ಥಳ, ಓಡಾಡಿದ ಹಾಗೂ ವಿದ್ಯಾಭ್ಯಾಸ ಮಾಡಿದ ಸ್ಥಳಗಳನ್ನು ಪಂಚತೀರ್ಥಗಳೆಂದು ಘೋಷಿಸಿ ಅಭಿವೃದ್ಧಿ ಮಾಡಿದೆ. ಆದರೆ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಜತೆಗೆ ಶವಸಸ್ಕಾರಕ್ಕೂ ಜಾಗ ನೀಡಲಿಲ್ಲ. ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನಾಗಮೋಹನ್‌ದಾಸ್ ವರದಿಯಂತೆ ಮೀಸಲಾತಿ ಹೆಚ್ಚಳ ಮಾಡಿದೆ ಎಂದು ಹೇಳಿದರು.

ಎಸ್‌ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ, ವಕೀಲ ನಲ್ಲಹಳ್ಳಿ ಸುರೇಶ್ ಮಾತನಾಡಿ, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದಲಿತರ ಬೀದಿಗಳು ಅಭಿವೃದ್ಧಿ ಕಂಡಿಲ್ಲ. ಇಡೀ ತಾಲೂಕಿನಲ್ಲಿ ಅಂಬೇಡ್ಕರ್ ಭವನಗಳು ನಿರ್ಮಾಣವಾಗಿಲ್ಲ. ದಲಿತ ಸಮುದಾಯದ ಭೌತಿಕ ಶಕ್ತಿ ಹೆಚ್ಚಿಸಿಕೊಳ್ಳಲು ಪಟ್ಟಣದಲ್ಲಿ ಸೌಲಭ್ಯವಿರುವ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕರು ಮನಸ್ಸೇ ಮಾಡಿಲ್ಲ. ಹೀಗಾಗಿ ದಲಿತರು ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಅವರನ್ನು ಬೆಂಬಲಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಸಿ ಮೋರ್ಚಾದ ತಾಲೂಕು ಅಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ವೇಣುಗೋಪಾಲ್, ಬಿಜೆಪಿ ಟೌನ್ ಘಟಕದ ಅಧ್ಯಕ್ಷ ಶ್ರೀನಿವಾಸ್ ನಾಯಕ, ಎಸ್‌ಟಿ ಮೋರ್ಚಾದ ತಾಲೂಕು ಅಧ್ಯಕ್ಷ ಕುಮಾರನಾಯಕ ಮುಖಂಡರಾದ ಎಚ್.ಎನ್.ಮಂಜುನಾಥ್, ವಿಷಕಂಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net