ಬಿಜೆಪಿಗೆ ಜನಬೆಂಬಲ

06mdk04
Published on

ಶನಿವಾರಸಂತೆ: ಪ್ರಧಾನಿ ನರೇಂದ್ರ ಮೋದಿ ಅವರ ರ‌್ಯಾಲಿಗೆ ಕಂಡು ಬರುತ್ತಿರುವ ಜನಬೆಂಬಲ ನೋಡಿದರೆ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಿಶ್ವಾಸವ್ಯಕ್ತಪಡಿಸಿದರು.


ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಪರ ಶನಿವಾರಸಂತೆಯಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಕರ್ನಾಟಕಕ್ಕೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನ ಅವಶ್ಯಕತೆ ಇಲ್ಲ, ಕರ್ನಾಟಕ ಎಲ್ಲ ಕ್ಷೇತ್ರದಲ್ಲೂ ಮುಂದಿದೆ. ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಈ ಬಾರಿ ಬಿಜೆಪಿ ನೀತಿ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದೆ. ಬಡವರು ಬದುಕಬೇಕೆಂಬ ನೀತಿ ಬಿಜೆಪಿಯದ್ದು, ಬಡವರು ಸಾಯಬೇಕೆಂಬ ನೀತಿ ಕಾಂಗ್ರೆಸ್ ಪಕ್ಷದ್ದು. ಬಿಜೆಪಿ ಹಿಂದುತ್ವ ಮತ್ತು ರಾಷ್ಟ್ರವಾದಿ ನೀತಿ ಹೊಂದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಶಪಥ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಅವರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮನವಿ ಮಾಡಿದರು.


ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಮನೆ ಮನೆಗೆ ಗ್ಯಾಸ್ ತಲುಪಿಸಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲಬೇಕು. ಎಸ್‌ಸಿ, ಎಸ್‌ಟಿ ರಕ್ಷಣೆ ಮಾಡುತ್ತೇವೆ ಎಂದವರು ಶೋಷಣೆ ಮಾಡಿದರು. ಆದರೆ ಬಿಜೆಪಿ ಸರ್ಕಾರ ಮೀಸಲಾತಿ ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ. ಅಗತ್ಯ ಇರುವ ಎಲ್ಲ ಜನಾಂಗಗಳಿಗೆ ಅಭಿವೃದ್ಧಿ ನಿಗಮ ಮಾಡಲಾಗಿದೆ. ಕರೊನಾ ಸಂದರ್ಭದಲ್ಲಿ ಕೊಡಗು ಜಿಲ್ಲಾಸ್ಪತ್ರೆಯಲ್ಲಿ 46 ಸಾವಿರ ಜನರಿಗೆ ಚಿಕಿತ್ಸೆ ನೀಡಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗ ದಳ ಬ್ಯಾನ್ ಮಾಡುವ ಬಗ್ಗೆ ಹೇಳಿದ್ದಾರೆ. ಹಾಗಾದರೆ ಬಜರಂಗದಳ ದೇಶದ್ರೋಹಿ ಸಂಘಟನೆಯಾ ಎಂದು ಪ್ರಶ್ನಿಸಿದರು.


ಬಸವಾಪಟ್ಟಣದ ಶ್ರೀಬಸವಲಿಂಗ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿದರು. ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ ವೇದಿಕೆಯಲ್ಲಿದ್ದರು.


ಇದಕ್ಕೂ ಮೊದಲು ಕೊಡ್ಲಿಪೇಟೆಯಿಂದ ಗುಡುಗಳಲೆ ಮಾರ್ಗವಾಗಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೂ ಬೃಹತ್ ಬೈಕ್ ರ‌್ಯಾಲಿ ನಡೆಯಿತು. ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.


ಶನಿವಾರ ಇಡೀ ಪಟ್ಟಣ ಕೇಸರಿಮಯವಾಗಿತ್ತು. ಎಲ್ಲೆಲ್ಲೂ ಬಿಜೆಪಿ ಬಾವುಟಗಳೇ ರಾರಾಜಿಸಿದವು. ಬಿಜೆಪಿ ಮತ್ತು ನರೇಂದ್ರ ಮೋದಿ ಪರವಾದ ಘೋಷಣೆಗಳು ಕೇಳಿಬಂದವು. ನಂತರ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶ ನಡೆಯಿತು. ಅಸ್ಸಾಂ ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಭದ್ರತೆ ಆಯೋಜಿಸಲಾಗಿತ್ತು.


ಸಮಾವೇಶದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಅನಂತ್‌ಕುಮಾರ್ ಅವರನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.


ಅನಂತ್‌ಕುಮಾರ್ ಮಾತನಾಡಿ, ಕಾಂಗ್ರೆಸ್‌ನಲ್ಲಿದ್ದಾಗ ಜನಪ್ರತಿನಿಧಿಯಾಗಿ ಉತ್ತಮ ಕೆಲಸ ಮಾಡಿದರೂ ಅಲ್ಲಿ ತನ್ನ ಜಾತಿ ನೋಡಿ ತುಳಿಯಲಾಯಿತು. ಇದೀಗ ಮರಳಿ ಬಿಜೆಪಿಗೆ ಬಂದಿದ್ದು, ಮುಂದೆ ಗುರಿ, ಹಿಂದೆ ಗುರು ಇರುವುದರಿಂದ ಜನಸೇವೆಗೆ ಉತ್ತಮ ಅವಕಾಶ ಸಿಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net