

ಸೊರಬ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಬೇಕು ಎನ್ನುವುದನ್ನು ನಿರ್ಧರಿಸುವ ಅಧಿಕಾರ ಪಕ್ಷದ ವರಿಷ್ಠರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಇದೆಯೇ ಹೊರತು ನಮೋ ವೇದಿಕೆ ಮುಖಂಡರಿಗೆ ಇಲ್ಲ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಹೇಳಿದರು.
ಬಿಜೆಪಿಯಲ್ಲಿ ಒಡಕು ಮೂಡಲು ಕಾರಣವಾಗಿರುವ ನಮೋ ವೇದಿಕೆ ಮುಖಂಡರನ್ನು ಪಕ್ಷದ ವಿವಿಧ ಸಮಿತಿಯಿಂದ ವಜಾ ಮಾಡಲಾಗಿದೆ. ಬಿಜೆಪಿಗೂ ಹಾಗೂ ನಮೋ ವೇದಿಕೆಗೂ ಯಾವುದೇ ಸಂಬಂಧವಿಲ್ಲ. ಅವರು ಮಾಡುವ ಆರೋಪ ನಿರಾಧಾರವಾಗಿದ್ದು ಅವರು ನೀಡುವ ಹೇಳಿಕೆ ವೈಯಕ್ತಿಕವಾಗಿರುವುದರಿಂದ ಮನ್ನಣೆ ನೀಡುವ ಅಗತ್ಯವಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕಿನಾದ್ಯಂತ ಸರ್ಕಾರದ ವಿವಿಧ ಯೋಜನೆಗಳಡಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕುಮಾರ್ ಬಂಗಾರಪ್ಪ ಆದ್ಯತೆ ನೀಡಿ ಪ್ರತಿ ವ್ಯಕ್ತಿಗೂ ಸೌಲಭ್ಯ ಒದಗಿಸಲು ಶ್ರಮಿಸುತ್ತಿದ್ದಾರೆ. ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಮಾನ್ಯತೆ ನೀಡಲಿಲ್ಲ ಎನ್ನುವ ಉದ್ದೇಶದಿಂದ ಶಾಸಕರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದರಲ್ಲಿ ಹುರುಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿ ಕಾಫಿ, ಕಾಳುಮೆಣಸು, ಏಲಕ್ಕಿ ಬೆಳೆಯತ್ತಿರುವ ಸಣ್ಣ ರೈತರಿಗೆ ಜಮೀನು ಮಂಜೂರಾತಿ ಮಾಡಲಾಗಿದ್ದು ಅದರನ್ವಯ ಮಲೆನಾಡು ಭಾಗದಲ್ಲಿ ಬಗರ್‌ಹುಕುಂ ರೈತರ ಜಮೀನನ್ನು ಸಕ್ರಮ ಮಾಡಲು ಸರ್ಕಾರ ಮುಂದಾಗಿದೆ. ಜನವರಿ ಅಂತ್ಯದೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ ಹಾಗೂ ದಂಡಾವತಿ ನದಿಗೆ ಅಡ್ಡಲಾಗಿ 37 ಸರಣಿ ಬ್ಯಾರೇಜ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿಸ್ತಾರ್ ಯೋಜನೆಯಡಿ ನಿರ್ಮಾಣವಾಗಲಿರುವ ಕಾಮಗಾರಿಯನ್ನು ಭೂಮಿಪೂಜೆ ಮಾಡಲಿದ್ದಾರೆ ಎಂದು ತಿಳಿಸಿದರು.