ಬಿಜೆಪಿಗಿಂತ ಕಾಂಗ್ರೆಸ್‌ನಲ್ಲೇ ಲಂಚ ಕಡಿಮೆ

SSV
Published on

ಚಿತ್ರದುರ್ಗ: ಎಲ್ಲ ಕಡೆ ಲಂಚದ ಹಾವಳಿ ಹೆಚ್ಚಾಗಿದ್ದು, ಭ್ರಷ್ಟಾಚಾರ ಕಡಿಮೆಯಾದಲ್ಲಿ ಅಧಿಕಾರ ಸಿಗುತ್ತದೆ. ಹಾಗೇ ಬಿಜೆಪಿಯವರಿಗೆ ಹೋಲಿಸಿದರೆ, ಕಾಂಗ್ರೆಸ್‌ನಲ್ಲಿ ಲಂಚ ಕಡಿಮೆ ಇದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾಜಾತ್ರೆ ಅಂಗವಾಗಿ ನಾಯಕನಹಟ್ಟಿಯ ಸ್ವಾಮಿ ದೇಗುಲಕ್ಕೆ ಶನಿವಾರ ಭೇಟಿ ನೀಡಿ ದರ್ಶನ ಪಡೆದ ನಂತರ ಮಾತನಾಡಿದರು.

ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದು ಮತಿ ಭ್ರಮಣೆಯಾದ ಕೆಲವರು ಹೇಳುತ್ತಿದ್ದಾರೆ. ಆದರೆ, 5ವರ್ಷ ಖಂಡಿತ ಪೂರೈಸಲಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಇನ್ನೊಂದಿಷ್ಟು ಗ್ಯಾರಂಟಿ ಯೋಜನೆಯೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದರು.

ಬಿಜೆಪಿಗರು ಹೇಳುವ ಹಾಗೇ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರ ನಾವೇ ಗೆಲ್ಲುತ್ತೇವೆ ಎಂಬುದು ಸಾಧ್ಯವಿಲ್ಲದ ಮಾತು. ರಾಜ್ಯದಲ್ಲಿ ಕಾಂಗ್ರೆಸ್ 10ರಿಂದ 12 ಸ್ಥಾನ ಜಯಗಳಿಸುವಲ್ಲಿ ಯಾವ ಅನುಮಾನವಿಲ್ಲ ಎಂದು ಹೇಳಿದರು.

ದಾವಣಗೆರೆ ಕ್ಷೇತ್ರದಲ್ಲಿ ಸಂಬಂಧಿಕರೇ ಎದುರಾಳಿಯಾಗಿದ್ದರೂ ಸಂಬಂಧ, ರಾಜಕೀಯ ಬೇರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರು ಕಳೆದ 5ವರ್ಷದಿಂದ ಸಕ್ರಿಯವಾಗಿ ದಾವಣಗೆರೆ ಜಿಲ್ಲೆಯಲ್ಲಿ ಹಲವು ಸಾಮಾಜಿಕ ಕಾರ್ಯ ಮಾಡಿದ್ದಾರೆ. ಹೀಗಾಗಿ ಜನಾಶೀರ್ವಾದ ಸಿಗಲಿದೆ ಎಂದರು.

ದಾವಣಗೆರೆಯ ಆನಂದಪ್ಪ, ಸುರಭಿ ಶಿವಮೂರ್ತಿ, ಕುರುಡಿಗಿರಿ ಸ್ವಾಮಿ, ದೇಗುಲ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಜೆ.ಪಿ.ರವಿಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net