

ಹಾಸನ: ದೇಶದಲ್ಲಿ ಭ್ರಷ್ಟಾಚಾರಿಗಳು ಯಾರಾದರು ಇದ್ದರೆ ಅದು ಬಿಜೆಪಿಗರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಕಲೇಶಪುರ ತಾಲೂಕಿನ, ದೊಡ್ಡತಪಲೆ ಬಳಿ ಶನಿವಾರ ಸಂಭವಿಸಿರುವ ಭೂ ಕುಸಿತ ಪ್ರದೇಶ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರಾದರೂ ಇದ್ದರು ಅದು ಬಿಜೆಪಿಯವರು. ಬಿಜೆಪಿಯವರದ್ದು ಶೇ. 40 ಪಸೆರ್ಂಟ್ ಭ್ರಷ್ಟಾಚಾರ ಎಂದು ಕೆಂಪಣ್ಣ ಆರೋಪ ಮಾಡಿದ್ದರು ಎಂದರು.
ಇನ್ನೂ ಹತ್ತು ತಿಂಗಳು ಮಾತ್ರ ಸರ್ಕಾರ ಇರುತ್ತೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಮೊದಲು ಕುಮಾರಸ್ವಾಮಿ ಅವರು ಎಷ್ಟು ದಿನ ಕೇಂದ್ರದಲ್ಲಿ ಮಂತ್ರಿಯಾಗಿರುತ್ತಾರೆ ಗೊತ್ತಿದಿಯಾ ಎಂದು ಮರುಪ್ರಶ್ನಿಸಿ, ನಮಗೆ ಜನರು 136 ಸ್ಥಾನಗಳನ್ನು ನಮಗೆ ನೀಡಿ ಆಶೀರ್ವಾದ ಮಾಡಿದ್ದಾರೆ. ಜೆಡಿಎಸ್ 19 ಸೀಟ್ ಮಾತ್ರ. ಇದು ಕುಮಾರಸ್ವಾಮಿ ಅವರಿಗೆ ನೆನಪಿದೆಯಾ? ಹಾಸನದಲ್ಲಿ ಇವರ ಕುಟುಂಬದವರು ಆಳ್ವಿಕೆ ಮಾಡುತ್ತಿದ್ದರು. ಈಗ ಹಾಸನದಲ್ಲಿ ಎಂಪಿ ಗೆದ್ದಿರುವವರು ಯಾರು? ಎಂದು ತಿರುಗೇಟು ನೀಡಿದರು.
ಬಿಜೆಪಿಗರಿಗೆ ನೈತಿಕತೆ ಇದೆಯಾ?
ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿಚಾರ ವಿಷಯವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ. ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಅವರಿಗೆ ಮಾತನಾಡಲು ನೈತಿಕತೆ ಇಲ್ಲ. ಅವರ ಸರ್ಕಾರದ ಅವಧಿಯಲ್ಲಿ ಮಾಡಿರುವ ಎಲ್ಲ ಹಗರಣಗಳನ್ನು ಬಯಲಿಗೆಳೆಯುತ್ತೇವೆ. ಈಗಾಗಲೇ ಸಭೆಗಳನ್ನು ಆರಂಭಿಸಿದ್ದೇವೆ. ರಾಮನಗರ, ಚನ್ನಪಟ್ಟಣದಲ್ಲಿ ಸಭೆ ಮಾಡಿದ್ದೇವೆ. ಆ.9 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ಅವರ ಕಾಲದ ಎಲ್ಲಾ ಹಗರಣಗಳನ್ನು ಬಿಚ್ಚಿಡುತ್ತೇವೆ ಎಂದು ಹೇಳಿದರು.
ಯಡಿಯೂರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಆಗಿದೆ. ಅವರು ರಾಜಕೀಯದಲ್ಲಿ ಇರಲು ನಾಲಾಯಕ್ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.