

ಹಾಸನ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅತೀ ಕಡಿಮೆ ಸ್ಥಾನ ಪಡೆದು ಹೀನಾಯ ಸೋಲು ಅನುಭವಿಸಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೇ ಕಾರಣ ಎಂದು ಬಿಜೆಪಿ ಹಿರಿಯ ಮುಖಂಡ ಎಚ್.ಎ ರಾಮಚಂದ್ರ ಅರೋಪಿದರು.
ಬಿ.ಎಲ್. ಸಂತೋಷ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ, ರಾಜ್ಯ ಉಸ್ತುವಾರಿಯಾಗಿ ಕರ್ನಾಟಕ ರಾಜ್ಯವನ್ನು ಕಡೆಗಣಿಸಿದರು. ಇದರ ಪರಿಣಾಮವಾಗಿ ಇಂದು ಬಿಜೆಪಿ ಸೋಲು ಅನುಭವಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಹಿಂದೆ ಅನೇಕ ಬಾರಿ ಸಕಲೇಶಪುರ ಸೇರಿದಂತೆ ಹಾಸನ ಜಿಲ್ಲೆಗೆ ಭೇಟಿ ನೀಡುವಂತೆ ಮನವಿ ಮಾಡಿದರೂ ಇದುವರೆಗೂ ಬಂದಿಲ್ಲ. ಆದ್ದರಿಂದಲೇ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಕೇವಲ ಎರಡು ಸ್ಥಾನ ಗಳಿಸಿದೆ. ಆದ್ದರಿಂದ ಅವರಿಗೆ ಕರ್ನಾಟಕದ ಉಸ್ತುವಾರಿ ನೀಡಬಾರದು ಎಂದು ಆಗ್ರಹಿಸಿದರು.
ಬಿ.ಎಲ್. ಸಂತೋಷ್ ಅವರನ್ನೇ ಸಂಘಟನಾ ಕಾರ್ಯದರ್ಶಿಯಾಗಿ ಮುಂದುವರೆಸಿದರೆ ಮುಂದಿನ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿದೆ. ಕೇಂದ್ರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವೆಂಕಟೇಶ್, ಮಂಜುನಾಥ್, ಮುತ್ತಣ್ಣ ಇತರರು ಇದ್ದರು.