ಬಿಜೆಪಿ ಸುಳ್ಳಿನ ಯುನಿವರ್ಸಿಟಿ ಇದ್ದಂತೆ

shivakumar
Published on

ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ಬಿಜೆಪಿ ಸುಳ್ಳಿನ ಯುನಿವರ್ಸಿಟಿ (ವಿಶ್ವವಿದ್ಯಾಲಯ) ಇದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಅಷ್ಟೇ ಅಲ್ಲ, ಗೋವಾ, ಮಹಾರಾಷ್ಟ್ರ ದಲ್ಲಿಯೂ ಬಿಜೆಪಿ ಸರ್ಕಾರವಿದ್ದರೂ ಇವರು ಏನೂ ಕೆಲಸ ಮಾಡಲಿಲ್ಲ. ರಾಜ್ಯದ ಬಿಜೆಪಿ ಸಂಸದರು ಪ್ರಧಾನಿ ಮೋದಿ ಜತೆ ಮಹದಾಯಿ ವಿಚಾರದಲ್ಲಿ ಒಂದು ದಿನವೂ ಮಾತನಾಡಲಿಲ್ಲ. ನಾವೂ ರೈತರನ್ನು ಸೇರಿಸಿಕೊಂಡು ಹುಬ್ಬಳ್ಳಿಯಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿದು ಈಗ ತರಾತುರಿಯಲ್ಲಿ ದಿನಾಂಕ ಇಲ್ಲದ ಪತ್ರ ತೋರಿಸಿ ಜನರನ್ನು ಮೋಸ ಮಾಡಲು ಹೊರಟಿದ್ದಾರೆ ಎಂದರು.

ಬಿಜೆಪಿಯವರು ಹೇಳಿಕೊಂಡಿರುವ ಡಿಪಿಆರ್​ನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ಧರಾಗಿರಬೇಕು ಎಂದು ಹೇಳಲಾಗಿದೆ. ಹೀಗಿರುವಾಗ ಈಗ ತರಾತುರಿಯಲ್ಲಿ ಕೇಂದ್ರದ ಪತ್ರ ತಂದಿರುವುದು ಯಾಕೆ? ನಾವು ಅಧಿಕಾರಕ್ಕೆ ಬಂದ 6 ತಿಂಗಳಲ್ಲಿಯೇ ಕಳಸಾ ಬಂಡೂರಿ ನಾಲಾ ಯೋಜನೆ ಪ್ರಾರಂಭಿಸುತ್ತೇವೆ ಎಂದರು.

ಮಾಜಿ ಸಚಿವ ಸಂತೋಷ ಲಾಡ್ ರಾಷ್ಟ್ರೀಯ ನಾಯಕರು. ಅವರು ನನಗೆ, ಸಿಎಲ್​ಪಿ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಡಿ, ವಿಶ್ರಾಂತಿ ಪಡೆಯಲಿ ಎಂದು ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನು ನಾವೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net