ಬಿಜೆಪಿ ಸರ್ಕಾರದಿಂದ ಅಭಿವೃದ್ಧಿಗೆ ಹಿನ್ನಡೆ, ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ, ದೇವನಹಳ್ಳಿಯಲ್ಲಿ ‘ಗಾಂಧಿ ನಡಿಗೆ’ ಕಾರ್ಯಾಗಾರ

must
Published on

ದೇವನಹಳ್ಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ಹೋಗಿದೆ ಎಂದು ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದ ಚಿಕ್ಕಸಣ್ಣಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಗಾಂಧಿ ನಡಿಗೆ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.

ದೇವನಹಳ್ಳಿಯಲ್ಲಿ ಈ ಬಾರಿ ನಾವು ಯಾರಿಗೇ ಟಿಕೆಟ್ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡಿ ಎಂದು ಮನವಿ ಮಾಡಿಕೊಂಡರು.

ಮಹಾತ್ಮ ಗಾಂಧಿ ಮತ್ತು ಹಲವು ಸಮಾನ ಮನಸ್ಕರು ಸೇರಿ ಅಹಿಂಸಾ ಮಾದರಿಯ ಸ್ವಾತಂತ್ರ್ಯ ಹೋರಾಟ ರೂಪಿಸಿದ್ದರು. ಆದರೆ, ಪ್ರಧಾನಿ ಮೋದಿ ಮತ್ತು ಬಿಜೆಪಿ ಇಂದು ಬ್ರಿಟಿಷರ ಮಾದರಿಯಲ್ಲಿ ಒಡೆದು ಆಳುವ ನೀತಿ ಅನುಸರಿಸಿ, ದೇಶವನ್ನು ಖಾಸಗೀಕರಣ ಮಾಡಲು ಹೊರಟಿದೆ. ಇಂಥ ಬಿಜೆಪಿ ವಿರುದ್ಧ ನಾವು ಮತ್ತೊಂದು ಸುತ್ತಿನ ಸ್ವಾತಂತ್ರ್ಯ ಹೋರಾಟಕ್ಕೆ ಮುಂದಾಗಬೇಕಿದೆ. ಅಚ್ಛೇ ದಿನ್ ಆಯೇಗಾ ಎಂದು ಸುಳ್ಳು ಹೇಳುತ್ತಾ ಅಧಿಕಾರದಲ್ಲಿ ಮುಂದುವರಿದಿರುವ ಬಿಜೆಪಿಗರನ್ನು ಕೆಳಗಿಳಿಸಲು ನಮ್ಮ ಮುಖಂಡರು, ಕಾರ್ಯಕರ್ತರು ಆಂತರಿಕ ಕಚ್ಚಾಟ ಬದಿಗೊತ್ತಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬೂತ್‌ಮಟ್ಟದಿಂದ ಪಕ್ಷ ಸಂಘಟಿಸಿ: ಗಾಂಧಿ ನಡಿಗೆ ಎಂಬುದು ಸ್ವಾತಂತ್ರ್ಯ ಹೋರಾಟದ ಮಾದರಿಯ ಹೋರಾಟವಾಗಿದೆ. ಇದನ್ನು ಬಳಸಿಕೊಂಡು ಬೂತ್ ಮಟ್ಟದಿಂದ ಕಾಂಗ್ರೆಸ್ ಸಂಘಟಿಸಿ, ವಿಜಯ ಪತಾಕೆ ಹಾರಿಸಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಕರೆ ನೀಡಿದರು. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿದೆ. ಇದರಿಂದ ಬಡವರ ಬದುಕು ಬೀದಿಗೆ ಬಂದಿದೆ. ಇದನ್ನು ಗಮನಿಸಿದಾಗ ದೇಶದ ಬಡವರನ್ನು ರಕ್ಷಿಸಲು ಬಿಜೆಪಿ ಅಶಕ್ತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ವೈಚಾರಿಕ ಹೋರಾಟ: ಬಿಜೆಪಿಗೆ ನಾವು ವೈಚಾರಿಕವಾಗಿ ಪೈಪೋಟಿ ನೀಡಬೇಕಿದೆ. ನರೇಂದ್ರ ಮೋದಿ ಸರ್ಕಾರದ ವೈಲ್ಯಗಳನ್ನು ಜನರಿಗೆ ತಿಳಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ ಎಂದು ಮಾಜಿ ಮಾಜಿ ಸಂಸದ ರಾಜೀವಗೌಡ ಹೇಳಿದರು.

ಎಂಎಲ್‌ಸಿ ಎ. ರವಿ ಮಾತನಾಡಿ, ಯುವಪೀಳಿಗೆ ಇತಿಹಾಸ ಮರೆಯುತ್ತಿರುವ ಸಂದರ್ಭದಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮದ ಮೂಲಕ ದೇಶದ ಇತಿಹಾಸವನ್ನು ನೆನಪಿಸಿ ಕೊಡಲು ಇಂಥ ಕಾರ್ಯಕ್ರಮಗಳು ಅಗತ್ಯ. ದೇಶದ ಸ್ವಾತಂತ್ರ್ಯ ಒಂದೇ ಗಾಂಧೀಜಿ ಕನಸಾಗಿರಲಿಲ್ಲ. ಸಮಾಜದಲ್ಲಿ ಮೇಲು-ಕೀಳು, ಏರುಪೇರು ಸರಿಪಡಿಸಲು ಬಯಸಿದ್ದರು ಎಂದರು.

ಬಿಜೆಪಿ ಜಾತಿಯ ವಿಷ ಬೀಜ ಬಿತ್ತಿ, ಕೋಮು ಆಧಾರಿತ ರಾಜಕೀಯ ಮಾಡುತ್ತಿದೆ. ಮಂದಿರ ಮಸೀದಿಗಳನ್ನು ಒಡೆಯುವ ಕುಕೃತ್ಯ ಮಾಡುತ್ತಿದೆ. ಎಲ್ಲೋ ರಾಮಮಂದಿರ ನಿರ್ಮಾಣವಾದರೆ ದೇಶದ ಬಡಜನರ ಹೊಟ್ಟೆ ತುಂಬುವುದಿಲ್ಲ. ಕಾಂಗ್ರೆಸ್‌ನಿಂದ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಮುಖಂಡರಾದ ಬಿ.ಎಲ್.ಶಂಕರ್, ರೆಹಮಾನ್ ಖಾನ್, ಮಾಜಿ ಶಾಸಕರಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ನಾಗೇಶ್, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್, ಪುರಸಭೆ ಅಧ್ಯಕ್ಷೆ ರೇಖಾ, ಜಿಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್, ರಾಮಚಂದ್ರಪ್ಪ, ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್, ಅನಂತಕುಮಾರಿ, ಕೆ.ಸಿ. ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net