ಬಿಜೆಪಿ ಸರ್ಕಾರಕ್ಕಿಲ್ಲ ಅನ್ನದಾತರ ಪರ ಕಾಳಜಿ

21HBD01-Web
ಹಿರೇಬಾಗೇವಾಡಿಯ ರೈತ ಸೇವಾ ಸಹಕಾರಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಬಿ.ಎಸ್.ಗಾಣಗಿ ಮಾತನಾಡಿದರು. ಅಡಿವೇಶ ಇಟಗಿ, ಸಿ.ಸಿ.ಪಾಟೀಲ, ಪ್ರಕಾಶ ಜಪ್ತಿ, ಬಸವರಾಜ ತೋಟಗಿ, ಉಳವಪ್ಪ ರೊಟ್ಟಿ ಇದ್ದರು.
Published on

ಹಿರೇಬಾಗೇವಾಡಿ: ಸ್ಥಳೀಯ ರೈತ ಸೇವಾ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಬುಧವಾರ ರೈತ ಹುತಾತ್ಮ ದಿನ ಆಚರಿಸಲಾಯಿತು. ರೈತ ಮುಖಂಡ ಬಿ.ಎಸ್.ಗಾಣಗಿ ಮಾತನಾಡಿ, ಉತ್ತಮ ದಿನಗಳನ್ನು ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರನ್ನು ಸಮಸ್ಯೆಗೆ ಸಿಲುಕಿಸಿದೆ. ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ನೀಡುತ್ತೇವೆ ಎಂದ ಸರ್ಕಾರ ಸೋಯಾ ಬಿತ್ತನೆ ಬೀಜಗಳ ಬೆಲೆಯನ್ನು ಹೆಚ್ಚಿಸಿದೆ. ಅನ್ನದಾತರಿಗೆ ನೆರವಿನ ರೂಪದಲ್ಲಿ ನೀಡುತ್ತಿರುವ 2,000 ಹಣ ಯಾವುದಕ್ಕೂ ಸಾಲುತ್ತಿಲ್ಲ ಎಂದು ದೂರಿದರು.

ಸರ್ಕಾರಿ ನೌಕರರು ಸೇರಿದಂತೆ ಇತರೆ ಎಲ್ಲ ವೃತ್ತಿಪರರಿಗೆ ಅವರ ವೃತ್ತಿಗೆ ಬೇಕಾದಂತೆ ವಿದ್ಯುತ್ ಪೂರೈಸುವ ಸರ್ಕಾರ, ರೈತರಿಗೆ ಸಕಾಲಕ್ಕೆ ವಿದ್ಯುತ್ ಪೂರೈಕೆ ಮಾಡಲು ಮುಂದಾಗಿಲ್ಲ. ಇದರಿಂದ ರೈತರು ರಾತ್ರಿ ವೇಳೆ ಬೆಳೆಗಳಿಗೆ ನೀರುಣಿಸುವಂತಾಗಿದೆ. ಅನ್ನದಾತರ ಕುರಿತು ಕಾಳಜಿ ಹೊಂದಿರದ ಸರ್ಕಾರದ ಕ್ರಮ ನಿಜಕ್ಕೂ ಒಪ್ಪುವಂತಹದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಡಾ ಮಾಜಿ ಅಧ್ಯಕ್ಷ ಅಡಿವೇಶ ಇಟಗಿ ಮಾತನಾಡಿ, ಕಾರ್ಪೋರೇಟ್ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡುವ ಸರ್ಕಾರ ರೈತರು ಕೃಷಿ ಕಾಯ್ದೆ ವಿರೋಧಿಸಿ 10 ತಿಂಗಳಿಂದ ದೆಹಲಿಯಲ್ಲಿ ಹೋರಾಟ ನಡೆಸಿದರೂ ಸ್ಪಂದಿಸಲಿಲ್ಲ. ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದ ಪ್ರತಿನಿಧಿಗಳು ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಕೇವಲ ತೋರಿಕೆಗೆ ಮಾತ್ರ ಅನ್ನದಾತರ ಬಗ್ಗೆ ಕಾಳಜಿ ತೋರಿಸಿ ಜನರನ್ನು ವಂಚಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ಸಿ.ಸಿ.ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಶ್ರೀಕಾಂತ ಮಾಧುಭರಮಣ್ಣವರ ಮಾತನಾಡಿದರು. ಪ್ರಕಾಶ ಜಪ್ತಿ, ಬಸವರಾಜ ತೋಟಗಿ, ಉಳವಪ್ಪ ರೊಟ್ಟಿ, ಬಸಪ್ಪ ವಾಲಿಶೆಟ್ಟರ, ಗಂಗಪ್ಪ ಇಟಗಿ, ಮನೋಹರ ದುರ್ಗಣ್ಣವರ, ಶಂಕರ ಶಿಂತ್ರಿ, ಮಲ್ಲಿಕಾರ್ಜುನ ವಾಲಿಕಾರ, ಸುನೀಲ ಶೆಟ್ಟಿ, ನಾಗಯ್ಯ ಕಂಬಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net