ಬಿಜೆಪಿ ಸರ್ಕಾರ ಭ್ರಷ್ಟಾಚಾರದ ರಾಯಭಾರಿ ; ಡಿ.ಕೆ. ಸುರೇಶ್

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ರಾಯಭಾರಿ ; ಡಿ.ಕೆ. ಸುರೇಶ್
Published on

ಹಾಸನ: ರಾಜ್ಯ ಬಿಜೆಪಿ ಸರ್ಕಾರವು ಭ್ರಷ್ಟಾಚಾರದ ರಾಯಭಾರಿಯಾಗಿ ಕೆಲಸ ಮಾಡುತ್ತಿದೆ. 40% ಕಮಿಷನ್ ದಂಧೆ ಮೂಲಕ ದೇಶ ವಿದೇಶಗಳಲ್ಲಿ ಕುಖ್ಯಾತಿ ಪಡೆದಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಟೀಕಿಸಿದರು.

ಭಾರತ್ ಜೋಡೋ ಯಾತ್ರೆ ಸಿದ್ಧತಾ ಸಭೆಯಲ್ಲಿ ಭಾಗವಹಿಸಲು ಮಂಗಳವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಲ್ಲಿ 40% ಕಮಿಷನ್, ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಲಕ್ಷಾಂತರ ರೂ. ಲಂಚ ಪಡೆಯುತ್ತಾ ಅತ್ಯಂತ ಭ್ರಷ್ಟ ಸರ್ಕಾರವಾಗಿ ಹೊರಹೊಮ್ಮಿದೆ ಎಂದರು.

ಬಿಜೆಪಿ ನಾಯಕರು ಭಾರತ್ ಜೋಡೋ ಯಾತ್ರೆ ವಿಷಯವಾಗಿ ತಲೆಕೆಡಿಸಿಕೊಳ್ಳದೆ ದೇಶದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸಲಿ. ಬೆಲೆ ಏರಿಕೆ ನಿಯಂತ್ರಣಕ್ಕೆ, ಯುವಜನರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಿ ಎಂದು ವ್ಯಂಗ್ಯವಾಡಿದರು.

‘ಪೇ ಸಿಎಂ ಅದರೆ ಪೇ ಕಾಂಗ್ರೆಸ್ ಮೇಡಂ’ ಎಂಬುದಾಗಿ ಬಿಜೆಪಿ ನಾಯಕರು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಸುರೇಶ್ ಅವರು, ಸಿದ್ದರಾಮಯ್ಯ ಅವರು ಯಾವುದೇ ತನಿಖೆಗೆ ಸಿದ್ಧವಾಗಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಅವರದೇ ಸರ್ಕಾರ ಇರುವುದರಿಂದ ಯಾವ ತಿಖಾ ಸಂಸ್ಥೆಯಿಂದಲಾದರೂ ತನಿಖೆ ನಡೆಸಲಿ. ಅದು ಬಿಟ್ಟು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ದೇಶದ ವಿವಿಧೆಡೆ ಸರ್ಕಾರಗಳನ್ನು ಉರುಳಿಸಲು 300 ಕ್ಕೂ ಹೆಚ್ಚು ಶಾಸಕರನ್ನು ಖರೀದಿ ಮಾಡಿರುವ ಕೆಟ್ಟ ದಾಖಲೆಯನ್ನು ಬಿಜೆಪಿ ಹೊಂದಿದೆ. ಇಂತಹ ಪಕ್ಷ ಪ್ರಜಾಪ್ರಭುತ್ವಕ್ಕೆ ಮಾರಕ. ಬಿಜೆಪಿಯ ವಿವಿಧ ಅಂಗಸಂಸ್ಥೆಗಳು ಸಮಾಜದಲ್ಲಿ ಶಾಂತಿ ಕದಡುವ, ಪ್ರಚೋದನೆ ನೀಡುವ ಕೆಲಸ ಮಾಡುತ್ತಿವೆ. ದೇಶದ ಶಾಂತಿ ಮತ್ತು ಭದ್ರತೆಗೆ ಮಾರಕವಾಗಿರುವ ಎಲ್ಲಾ ಸಂಘಸಂಸ್ಥೆಗಳ ವಿರುದ್ಧವೂ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net