ಬಿಜೆಪಿ ಸಮಾವೇಶಕ್ಕಿಲ್ಲ ಹಾಜರಾತಿ ಕಾಂಗ್ರೆಸ್ಸಿಗರ ದೋಸ್ತಿ ಎಂಪಿ ಅನಂತ ಕುಮಾರ ಹೆಗಡೆ ಹೊಸ ವರಸೆ

Mp-Anant-kumar-Hgede-And-MLA-Satish-Sail
Published on

ಕಾರವಾರ: ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ಕಾರವಾರ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಜತೆ ತೋರಿದ ಆತ್ಮೀಯತೆ ಚರ್ಚೆಗೆ ಕಾರಣವಾಗಿದೆ.
ಶುಕ್ರವಾರ ಕಾರವಾರದಲ್ಲಿ ದಿಷಾ ಸಮಿತಿ ಸಭೆಗೆ ಆಗಮಿಸಿದ್ದ ಅನಂತ ಕುಮಾರ್ ಅವರನ್ನು ಸೈಲ್ ಭೇಟಿಯಾದರು. ಇಬ್ಬರೂ ಪರಸ್ಪರ ಆತ್ಮೀಯರಂತೆ ಆಲಂಗಿಸಿ ಅಭಿನಂದನೆ ಸಲ್ಲಿಸಿದರು. ನಂತರ ಅನಂತ ಕುಮಾರ ಹೆಗಡೆ ಸಭೆಯಲ್ಲಿ ಸತೀಶಣ್ಣ ಮತ್ತೇನು..?' ಎಂದು ಹೇಳುವ ಮೂಲಕ ಪ್ರೀತಿ ತೋರಿದರು.

ಸಭೆಯ ಬಳಿಕ ಅನಂತ ಕುಮಾರ ಹೆಗಡೆ ತಮ್ಮದೇ ಕಾರಿನಲ್ಲಿ ಸೈಲ್‌ರನ್ನು ಸರ್ಕ್ಯೂಟ್ ಹೌಸ್‌ಗೆ ಕರೆದೊಯ್ದರು. ಸುಮಾರು ಹೊತ್ತು ಗುಪ್ತ ಚರ್ಚೆ ನಡೆಸಿದರು. ಇಬ್ಬರೂ ಆಲಂಗಿಸಿದ ಫೋಟೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಊಹಾಪೋಹಗಳಿಗೆ ಕಾರಣವಾಗಿದೆ.

ಅನಂತ ಕುಮಾರ ಹೆಗಡೆ ಈ ಬಾರಿ ವಿಧಾನಸಭಾ ಚುನಾವಣೆಯ ಪ್ರಚಾರದಿಂದ ದೂರವೇ ಇದ್ದರು. ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಂಕೋಲಾಕ್ಕೆ ಆಗಮಿಸಿದಾಗಲೂ ಗೈರಾಗುವ ಮೂಲಕ ಅಚ್ಚರಿ ಮೂಡಿಸಿದ್ದರು.

ಬಿಜೆಪಿ ಅಧಿಕೃತ ಅಭ್ಯರ್ಥಿ ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ತಪ್ಪಿಸಲು ಮಾಡಿದ ಪ್ರಯತ್ನಗಳು ಗುಪ್ತವಾಗಿ ಉಳಿದಿರಲಿಲ್ಲ. ಈಗ ಸೈಲ್ ಜತೆಗಿನ ಸಖ್ಯ ಈಗ ಹಲವು ಉತ್ತರಗಳನ್ನು ನೀಡುತ್ತಿದೆ.

ಸಭೆಗೆ ಗೈರು, ಕಾರವಾರಕ್ಕೆ ಹಾಜರು:

2021 ರ ಜನವರಿ 6 ರ ಬಳಿಕ ನಂತರ ಅನಂತಕುಮಾರ ಹೆಗಡೆ ಜಿಲ್ಲಾ ಕೇಂದ್ರ ಕಾರವಾರದತ್ತ ಕಾಲಿರಿಸಿರಲಿಲ್ಲ. ಮಾತ್ರವಲ್ಲ ಜಿಲ್ಲೆಯ ಯಾವುದೇ ಸಭೆ, ಸಮಾರಂಭಗಳಲ್ಲಿ ಬಹಿರಂಗವಾಗಿ ಕಾಣಿಸಿರಲಿಲ್ಲ.

ಸಂಸದರಾಗಿ ತಮ್ಮ ಜವಾಬ್ದಾರಿಯಿಂದ ವಿಮುಖರಾಗಿರುವ ಅನಂತ ಕುಮಾರ ಹೆಗಡೆ ಅವರ ವರ್ತನೆಯ ಬಗ್ಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿತ್ತು. ಸಾರ್ವಜನಿಕ ಕಾರ್ಯ ಮಾತ್ರವಲ್ಲ ಪಕ್ಷದ ಕಾರ್ಯಚಟುವಟಿಕೆಗಳಲ್ಲೂ ಅಂತರವನ್ನು ಕಾಯ್ದುಕೊಂಡಿದ್ದರು.

ಪ್ರಧಾನಿ ಮೋದಿ ಸರ್ಕಾರದ 9 ವರ್ಷಗಳ ಸಾಧನೆಯನ್ನು ಜನರಿಗೆ ತಿಳಿಸುವ ಸಲುವಾಗಿ ಹೊನ್ನಾವರದಲ್ಲಿ ಹಾಗೂ ಯಲ್ಲಾಪುರಗಳಲ್ಲಿ ಬಿಜೆಪಿ ಸಮಾವೇಶ ಆಯೋಜಿಸಿತ್ತು. ಆದರೆ, ಸ್ವತಃ ಬಿಜೆಪಿ ಸಂಸದರೇ ಆ ಕಾರ್ಯಕ್ರಮಗಳಿಗೆ ಗೈರಾಗಿರುವುದು ಆಭಾಸಕ್ಕೆ ಕಾರಣವಾಯಿತು.

ಬೇರೆ ಊರುಗಳ ನಾಯಕರು ಬಂದು ಜಿಲ್ಲೆಯ ಸಾಧನೆಯನ್ನು ಕಾರ್ಯಕರ್ತರೆದುರು ಅರುಹಬೇಕಾಯಿತು. ಅನಂತ ಕುಮಾರ ಹೆಗಡೆ ಶುಕ್ರವಾರ ಪಕ್ಷದ ಕಾರ್ಯಕ್ರಮಗಳನ್ನು ಬದಿಗೊತ್ತಿ ಕಾರವಾರಕ್ಕೆ ಬಂದು ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಮುಖಂಡರಿಗೆಡೋಂಟ್ ಕೆರ್' ಸಂದೇಶ ರವಾನಿಸಿದಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net