ಬಿಜೆಪಿ ಸಂಸದರು ರಾಜೀನಾಮೆ ನೀಡಲಿ

congress
Published on

ಬೀದರ್: ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸಂಪೂರ್ಣ ಮೋಸವಾಗಿದೆ. ಯಾವೊಂದು ಯೋಜನೆ ನೀಡಿಲ್ಲ. ರಾಜ್ಯದ ಬಿಜೆಪಿ ಸಂಸದರೆಲ್ಲರೂ ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದರಿಂದಲೇ ರಾಜ್ಯಕ್ಕೆ ಈ ಪರಿ ಅನ್ಯಾಯವಾಗಿದೆ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ದೂರಿದರು.

ಕರ್ನಾಟಕಕ್ಕೆ ಜಿಎಸ್.ಟಿ ಮತ್ತು ಪ್ರಕೃತಿ ವಿಕೋಪದಡಿ ಅಗತ್ಯ ಅನುದಾನ ಕೊಡಲಿಲ್ಲ. ಈಗ ಕೇಂದ್ರ ಬಜೆಟ್ ನಲ್ಲಿಯೂ ಯಾವುದೇ ಕೊಡುಗೆ ನೀಡಿಲ್ಲ. ರಾಜ್ಯದ ಸಂಸದರು ಕೇವಲ ಪೇಪರ್ ನಲ್ಲಿ ಹುಲಿಯಂತೆ, ಪ್ರಧಾನಿ ಮೋದಿ ಅವರ ಎದುರು ಇಲಿಯಂತೆ ಆಗುತ್ತಾರೆ. ಜನರ ಹಿತ ಕಾಪಾಡದ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕೇಂದ್ರದ ಬಜೆಟ್ ಸೇಲ್ ಇಂಡಿಯಾ-ಲೂಟ್ ಇಂಡಿಯಾ ಆಗಿದೆ. ಕೃಷಿ ಸೆಸ್ ಹೆಸರಿನಲ್ಲಿ ಸಾರ್ವಜನಿಕರ ಮೇಲೆ ತೆರಿಗೆ ಹಾಕಿ ಲೂಟಿ ಮಾಡುತ್ತಿದ್ದರೆ, ದೇಶದ ಆಸ್ತಿಗಳಾದ ಸರ್ಕಾರಿ ಸಂಸ್ಥೆಗಳನ್ನು ಸೇಲ್ ಮಾಡಿ ಜನರನ್ನು ಉದ್ಯೋಗದಿಂದ ವಂಚಿತರಾಗಿ ಮಾಡಲಾಗುತ್ತಿದೆ. ಜನಸಾಮಾನ್ಯರಿಗೆ ಯೋಜನೆ ಕೊಡಲು ಇವರ ಬಳಿ ಹಣ ಇಲ್ಲ. ಶಿಕ್ಷಣಕ್ಕಾಗಿ ವಿದೇಶಿ ಹಣ ಬಳಕೆಗೆ ಅವಕಾಶ ನೀಡಿರುವುದು ನೋಡಿದರೆ ದೇಶಕ್ಕೆ ಎಂಥ ಕಷ್ಟಕಾಲ ಬಂದಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.

ಕೃಷಿ ಕಾಯ್ದೆ ಹಿಂತೆಗೆದುಕೊಳ್ಳುವ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ರೈತರಿಗೆ ಬೇಲಿ ಹಾಕುತ್ತಿರುವ ಸರ್ಕಾರ ಬ್ಯಾಂಕ್ ಗಳನ್ನು ಲೂಟಿ ಮಾಡಿ ಹೋಗುವವರಿಗೆ ಯಾವುದೇ ಬೇಲಿ ಹಾಕುತ್ತಿಲ್ಲ. ರೈತರ ಬದಲು ಗಡಿಯಲ್ಲಿ ಮನೆಗಳನ್ನು ಕಟ್ಟುತ್ತಿರುವ ಚೀನಾ ಸೈನಿಕರಿಗೆ ಲಾಠಿ, ಬಂದೂಕು ತೋರಿಸಲಿ. ರೈತರ ಗೋರಿಯ ಮೇಲೆ ಮಹಲ್ ಕಟ್ಟಲು ಕೇಂದ್ರ ಹೊರಟಿದೆ. ಕಾಂಗ್ರೆಸ್ ನಿರಂತರ ಅನ್ನದಾತರ ಬೆನ್ನಿಗೆ ನಿಲ್ಲಲಿದೆ ಎಂದು ಹೇಳಿದರು.

ಶಾಸಕ ರಹೀಮ್ ಖಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ, ಎಂ.ಎ. ಸಮಿ ಇದ್ದರು.

ಅಭಿವೃದ್ಧಿ ಕೆಲಸಗಳಿಗೆ ಮನ್ನಣೆ
ಬರುವ ಬೀದರ್ ನಗರಸಭೆ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದ ಸ್ಪರ್ಧೆಯಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರದು. ನಗರದ ಎಲ್ಲ 35 ವಾಡ್೯ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಸ್ಥಳೀಯ ಶಾಸಕ ರಹೀಮ್ ಖಾನ್ ಹೇಳಿದರು. ಎಲ್ಲ 35 ವಾಡ್೯ಗಳಲ್ಲಿ ಸರಾಸರಿ 2 ರಿಂದ 4 ಕೋಟಿ ರೂ. ಅನುದಾನದಲ್ಲಿ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಜನರು ಅಭಿವೃದ್ಧಿ ಕೆಲಸಗಳಿಗೆ ಮನ್ನಣೆ ನೀಡಲಿದ್ದಾರೆ ಎಂದು ಖಾನ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಜಿಲ್ಲಾ ಕಾಂಗ್ರೆಸ್ ನಿಂದ ನಗರದಲ್ಲಿ ಫೆ. 10 ಅಥವಾ 11ರಂದು ಹೋರಾಟ ಹಮ್ಮಿಕೊಳ್ಳಲಾಗುವುದು. ಕಾಂಗ್ರೆಸ್ ಕಚೇರಿಯಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಯಲಿದೆ.| ಬಸವರಾಜ ಜಾಬಶೆಟ್ಟಿಕಾಂಗ್ರೆಸ್ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net