ಬಿಜೆಪಿ ಶುದ್ಧೀಕರಣಕ್ಕಾಗಿ ಮಾಡಿದ ಸ್ಪರ್ಧೆ

e7a4ea31-18dd-4b75-801c-653afeb33a27
Published on

ಬಾಗಲಕೋಟೆ: ಬಿಜೆಪಿಗೆ ಸೆಡ್ಡು ಹೊಡೆದು ಲೋಕಸಭೆ ಕ್ಷೇತ್ರದಲ್ಲಿ ಬಂಡಾಯ ಸಾರಿ, ಕ್ಷೇತ್ರದಲ್ಲಿ ತಮ್ಮ ಗೆಲುವು ಶತಃಸಿದ್ಧ ಎಂದು ಬೀಗುತ್ತಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಫಲಿತಾಂಶಕ್ಕೂ ಮುನ್ನವೇ ಸೋಲು ಒಪ್ಪಿಕೊಂಡಂತೆ ಕಾಣುತ್ತಿದೆ. ಹಾಗೆಯೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಫಲಿತಾಂಶದ ಬಳಿಕ ಮತ್ತೆ ರಾಯಣ್ಣ ಬ್ರಿಗೇಡ್ ಸಂಘಟನೆ ಮಾಡಲು ಮುಂದಾಗುತ್ತಾರಾ?

ಗೊತ್ತಿಲ್ಲ, ಆದರೆ, ಭಾನುವಾರ ಬಾಗಲಕೋಟೆಯಲ್ಲಿ ಮಾಧ್ಯಮಗಳ ಎದುರು ಈ ಸುಳಿವು ಬಿಟ್ಟುಕೊಟ್ಟಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ತಾವು ಗೆದ್ದು ಸಂಸದರಾಗುತ್ತೇನೆ ಎಂದಾಗಲಿ, ಸ್ವಾಭಿಮಾನದ ಹೋರಾಟ ಎಂದಾಗಲಿ ನಾನು ಭಾವಿಸಿಲ್ಲ. ರಾಜ್ಯ ಬಿಜೆಪಿ ಶುದ್ಧೀಕರಣ ಆಗಬೇಕು ಎನ್ನುವ ಹಲವರು ಅಪೇಕ್ಷೆಯಂತೆ ನಾನು ಸ್ಪರ್ಧೆ ಮಾಡಿದ್ದಾಗಿ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ತನ್ನ ಮೂಲ ಸಿದ್ಧಾಂತದ ಹೊರತಾಗಿ ತಂದೆ-ಮಗ ಹಿಡಿತದಲ್ಲಿ ಪಕ್ಷ ಸಿಲುಕಿದೆ. ಇದು ಬಿಜೆಪಿಯ ಮೂಲ ಸಿದ್ಧಾಂತ ನಂಬಿ ಬಂದಿರುವ ಹಾಗೂ ಹಿಂದುತ್ವವಾದಿಗಳಿಗೆ ಬಹಳ ನೋವು ತಂದಿದೆ. ಅವರೆಲ್ಲರ ಪ್ರತಿನಿಧಿಯಾಗಿ ಈ ಸಲ ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷ ತಾಯಿ-ಮಕ್ಕಳ ಪಕ್ಷ ಎನ್ನುತ್ತಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಏನಾಗಿದೆ? ನಾನು ಬಿಜೆಪಿಯಿಂದ ಎಲ್ಲವನ್ನು ಪಡೆದಿದ್ದಾಗಿದೆ. ಪಡೆಯಲು ಇನ್ನೇನು ಉಳಿದಿಲ್ಲ. ಆದರೆ, ತಾಯಿ ಸ್ವರೂಪವಾದ ಪಕ್ಷಕ್ಕೆ ನಮ್ಮ ರಾಜ್ಯದಲ್ಲಿ ಹೊಡೆತ ಬಿದ್ದಿದೆ. ಇದಕ್ಕಾಗಿ ನಾನು ಹಲವರು ಪ್ರತಿನಿಽಯಾಗಿ ಹೋರಾಟ ಮಾಡುತ್ತಿದ್ದೇನೆ ಎಂದರು.

ಇನ್ನು ಫಲಿತಾಂಶದ ಬಳಿಕ ತಮ್ಮ ಮುಂದಿನ ರಾಜಕೀಯ ನಡೆಯನ್ನು ಒಂದು, ಎರಡು ದಿನದಲ್ಲಿ ಪ್ರಟಿಸುವುದಿಲ್ಲ. ರಾಜ್ಯದಲ್ಲಿ ಮತ್ತೆ ರಾಯಣ್ಣ ಬ್ರಿಗೇಡ್ ಶುರುಮಾಡುವಂತೆ ಸಲಹೆ ಬರುತ್ತಿವೆ. ಮತ್ತು ಕೆಲವರು ಹಿಂದುಳಿದ ದಲಿತರನ್ನು ಒಗ್ಗೂಡಿಸಿಕೊಂಡು ಬರೀ ರಾಜಕೀಯ ಪ್ರಾತಿನಿದ್ಯ ಮಾತ್ರವಲ್ಲದೇ ಸಾಮಾಜಿಕ, ಶೈಕ್ಷಣಿಕ ನ್ಯಾಯಕ್ಕಾಗಿ ಸಂಘಟನೆ ಮಾಡಲು ಹೇಳುತ್ತಿದ್ದಾರೆ. ಹೀಗಾಗಿ ಚುನಾವಣೆ ಫಲಿತಾಂಶದ ಬಳಿಕ ಹಿರಿಯರ ಸಭೆ ಕರೆದು ಮುಂದೆ ಯಾವ ರೀತಿ ಹೆಜ್ಜೆ ಹಾಕಬೇಕು ಎನ್ನುವ ನಿರ್ಧಾರ ಮಾಡುವುದಾಗಿ ಹೇಳಿದರು.

ಅದಾಗ್ಯೂ ಈ ಫಲಿತಾಂಶದ ಬಳಿಕ ರಾಜ್ಯದಲ್ಲಿ ಬಿಜೆಪಿ ಶುದ್ಧೀಕರಣದತ್ತ ಮುಂದಾಗುತ್ತದೆ ಎನ್ನುವ ವಿಶ್ವಾಸದಲ್ಲಿ ನಾನು ಇದ್ದೇನೆ. ಹಾಗೊಂದು ವೇಳೆ ಯಾವುದೇ ಬದಲಾವಣೆಗೆ ಮುಂದಾಗದೇ ಇದ್ದರೆ ತಾವು ಮುಂದೆ ಏನು ಮಾಡಬೇಕು ಎಂದು ಹಿರಿಯರ ಸಲಹೆ ಪಡೆದು ಹಿಂದುಳಿದ, ದಲಿತರ ಸಂಘಟನೆಯೋ ಅಥವಾ ರಾಯಣ್ಣ ಬ್ರಿಗೇಡೋ ಇಲ್ಲವೇ ಇನ್ನೇನು ಎನ್ನುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net