

ಚಿತ್ರದುರ್ಗ:
ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಇಂಥ ಹಡಗು ಏರಲು ಬಿಜೆಪಿಯ ಯಾವೊಬ್ಬ ಶಾಸಕರೂ ಸಿದ್ಧರಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಎಸ್.ಟಿ.ಸೋಮಶೇಖರ್‌ಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿಯ 8 ಶಾಸಕರು ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ ಕಾಂಗ್ರೆಸ್ ನಾಯಕರು ಇಂಥ ಭ್ರಮೆಯಿಂದ ಹೊರಬರುವುದು ಒಳಿತು ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ. ಜನ ಈ ಸರ್ಕಾರದ ವಿರುದ್ಧ ತಿರುಗಿ ಬೀಳುವ ಸಂದರ್ಭ ಎದುರಾಗಿದೆ. ಇಂಥ ಸನ್ನಿವೇಶದಲ್ಲಿ ಯಾವ ಶಾಸಕರಾದರೂ ಕಾಂಗ್ರೆಸ್ ಸೇರುತ್ತಾರೆಯೇ ಎಂದು ಕಾಂಗ್ರೆಸ್ ನಾಯ ಕರ ಕಾಲೆಳೆದರು.
ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅನುಕೂಲಸಿಂಧು ರಾಜಕಾರಣಿ. ಚನ್ನಪಟ್ಟಣ ಚುನಾವಣೆಯಲ್ಲಿ ಗೆದ್ದರೆ ಮಂತ್ರಿ ಆಗಬಹುದೆಂದು ಟಿಕೆಟ್ ಘೋಷಣೆಗೆ ಮುನ್ನವೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂದು ದೂರಿದರು.
ಯೋಗೀಶ್ವರ್ ಅವರಿಗೆ ಬಿಜೆಪಿ ಅಥವಾ ಜೆಡಿಎಸ್‌ನಿಂದ ಸ್ಪರ್ಧಿಸಲು ಹೇಳಲಾಗಿತ್ತು.ಆದರವರು ಯಾವುದೋ ಲೆಕ್ಕಾಚಾರ ಹಾಕಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಬಿಜೆಪಿಯಿಂದ ಅನ್ಯಾಯ ಆಗಿಲ್ಲವೆಂದು ಹೇಳಿದ್ದಾರೆ ಎಂದರು.
ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ. ಮುಡಾ ಪ್ರಕರಣದ ತನಿಖೆ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಪ್ರಕರಣದಿಂದ ಹೊರಬರಲು ಕೋರ್ಟ್‌ಗಳಿಗೆ ಅಲೆಯುತ್ತಿದ್ದಾರೆ. ಮೂರು ಕ್ಷೇತ್ರಗಳಲ್ಲೂ ಎನ್‌ಡಿಎ ಗೆಲ್ಲಲಿದೆ ಎಂದು ತಿಳಿಸಿದರು.
ಶಿಗ್ಗಾವಿ ವಿಧಾನಸಭೆ ಕ್ಷೇತ್ರದಲ್ಲಿ ಭರತ್‌ಗೆ ಟಿಕೆಟ್ ಬೇಡವೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರೂ, ಸರ್ವೆ ವರದಿ ಆಧರಿಸಿ ಹೈಕಮಾಂಡ್ ಟಿಕೆಟ್ ಘೋಷಿಸಿದೆ ಎಂದರು. ಎಂ.ಕೆ ನಟರಾಜು, ಲೋಕೇಶ್, ಛಲವಾದಿ ಎನ್.ತಿಪ್ಪೇಸ್ವಾಮಿ, ರುದ್ರಪ್ಪ ಇದ್ದರು.