ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಂಡು ಕಾಂಗ್ರೆಸ್, ಜೆಡಿಎಸ್‌ಗೆ ನಡುಕ: ಕೆ.ಎಸ್.ಈಶ್ವರಪ್ಪ

BDVT WEB
Published on

ಭದ್ರಾವತಿ: ಭದ್ರಾವತಿ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸುವ ಮೂಲಕ ವಿಜಯ ಸಂಕಲ್ಪ ಯಾತ್ರೆ ಹೊಸ ಅಧ್ಯಾಯ ಬರೆಯಲಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರಕ್ಕೆ ಆಗಮಿಸಿದ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಹೊಸಮನೆ ಶಿವಾಜಿ ವೃತ್ತದಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲೆಯ ಎಲ್ಲ ಸ್ಥಾನಗಳಲ್ಲೂ ಬಿಜೆಪಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಶ್ರಮಪಡುವ ಅಗತ್ಯವಿದೆ. ಇಲ್ಲಿನ ಅಭ್ಯರ್ಥಿ ಯಾರೆಂಬುದು ಖಚಿತವಾದ ದಿನದಿಂದ ಎಲ್ಲರೂ ಒಗ್ಗಟ್ಟಾಗಿ ಸಂಕಲ್ಪ ಮಾಡುವುದರೊಂದಿಗೆ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಭದ್ರಾವತಿಯಲ್ಲಿಯೂ ಬಿಜೆಪಿ ಶಾಸಕರನ್ನು ತರಬೇಕು. ಇದು ನಮ್ಮ ಮುಖ್ಯ ಗುರಿಯಾಗಿರಬೇಕು ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪ್ರಬಲವಾಗಿರಬೇಕು. ಮುಂದಿನ ಚುನಾವಣೆಯಲ್ಲಿಯೂ ನಮ್ಮದೆ ಸರ್ಕಾರ ಬರಬೇಕು ಎಂಬ ಉದ್ದೇಶದಿಂದ ಆರಂಭಗೊಂಡ ವಿಜಯ ಸಂಕಲ್ಪ ಯಾತ್ರೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಜಯ ಸಂಕಲ್ಪ ರಥಯಾತ್ರೆಯನ್ನು ನೋಡಿ ಈಗಾಗಲೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಡುಕ ಉಂಟಾಗಿದೆ. ರಥಯಾತ್ರೆಯಲ್ಲಿ ಇಷ್ಟೊಂದು ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿರುವುದು ಸಂತಸ ತಂದಿದೆ. ರಥಯಾತ್ರೆಯ ಮೆರವಣಿಗೆಯು ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಶುಭ ಸೂಚನೆ ಸಹ ಕೊಡುತ್ತಿದೆ ಎಂದರು.

ಅನ್ಯಾಯ ಮಾಡಿಲ್ಲ: ವಿಐಎಸ್‌ಎಲ್ ಕಾರ್ಖಾನೆ ವಿಚಾರದಲ್ಲಿ ನಾನು ಭದ್ರಾವತಿಯ ಜನತೆಗೆ ಅನ್ಯಾಯ ಮಾಡಿಲ್ಲ. ಕಾರ್ಖಾನೆಯ ಅಭಿವೃದ್ದಿ ವಿಚಾರದಲ್ಲಿ ಹಿಂದಿನಿಂದಲೂ ನನ್ನ ಪ್ರಯತ್ನ ನಿರಂತರವಾಗಿದೆ. ಆದರೆ ಕೆಲವು ಕಾರಣಗಳಿಂದ ಹಿನ್ನಡೆಯಾಗಿದೆ. ಹಿನ್ನಡೆಯಾಗಲು ಹಲವು ತಾಂತ್ರಿಕ ದೋಷಗಳೂ ಸಹ ಕಾರಣವಾಗಿವೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.

ಅದ್ದೂರಿಯಾಗಿ ಸಾಗಿದ ಯಾತ್ರೆ: ನಗರಕ್ಕೆ ಆಗಮಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ನಗರದ ಲೋಯರ್ ಹುತ್ತಾದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಜಿಲ್ಲಾ ಹಾಗೂ ರಾಜ್ಯ ನಾಯಕರು ರಥವನ್ನೇರಿ ರಸ್ತೆಯ ಇಕ್ಕೆಲಗಳಲ್ಲಿದ್ದ ಜನರಿಗೆ ಕೈಮುಗಿಯುತ್ತ ಸಾಗಿದರು, ನೂರಾರು ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರೆ, ಮಹಿಳಾ ಕಾರ್ಯಕರ್ತರು ರಥದ ಮುಂಭಾಗ ಜೈಕಾರ, ಘೋಷಣೆಗಳನ್ನು ಕೂಗುತ್ತ ಸಾಗಿದರು. ಮೆರವಣಿಗೆ ಲೋಯರ್ ಹುತ್ತಾದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಿ.ಎಚ್.ರಸ್ತೆ, ಮೂಲಕ ಮಾಧವಾಚಾರ್ ವೃತ್ತ, ರಂಗಪ್ಪ ವೃತ್ತದ ಮೂಲಕ ಹೊಸಮನೆ ಶಿವಾಜಿ ಸರ್ಕಲ್ ತಲುಪಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಸಾಂಸ್ಕೃತಿಕ ಕಲಾತಂಡಗಳು ಹೆಜ್ಜೆ ಹಾಕಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net