ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

11spt1
Published on

ಸೋಮವಾರಪೇಟೆ : ರಾಜ್ಯ ಸರಕಾರವು ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ತಾಲೂಕು ಬಿಜೆಪಿ ರೈತ ಮೋರ್ಚಾದ ವತಿಯಿಂದ ಸೋಮವಾರ ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಪುಟ್ಟಪ್ಪ ವೃತ್ತದಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ರೈತರನ್ನು ಕಡೆಗಣಿಸುತ್ತಿದೆ. ಅಧಿಕಾರಕ್ಕೆ ಬಂದ ನೂರು ದಿನಕ್ಕೆ ರಾಜ್ಯದಲ್ಲಿ ನೂರಾರು ಸಮಸ್ಯೆಗಳು ತಲೆದೋರಿದೆ ಎಂದು ಆರೋಪಿಸಿದರು.
ಕಿಸಾನ್ ಸಮ್ಮಾನ ಯೋಜನೆಯಡಿ ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ರೂ.ಗೆ ಸರ್ಕಾರ ಕತ್ತರಿ ಹಾಕಿದೆ. ರೈತ ಮಕ್ಕಳಿಗೆ ನೀಡುತ್ತಿದ್ದ ರೈತ ವಿದ್ಯಾನಿಧಿಯನ್ನು ಸ್ಥಗಿತಗೊಳಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಶ್ರಮಶಕ್ತಿ, ರೈತ ಸಂಪದ, ಜಿಲ್ಲೆಗೊಂದು ಗೋ ಶಾಲೆ ಯೋಜನೆಗಳನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.
ರೈತರ ಕೃಷಿ ಭೂಮಿಯಲ್ಲಿರುವ ಕೊಳವೆ ಹಾಗೂ ತೆರೆದ ಬಾವಿಯಿಂದ ಕೃಷಿ ಚಟುವಟಿಕೆಗೆ ನೀರೆತ್ತಲು ದಿನಕ್ಕೆ 7ಗಂಟೆ ವಿದ್ಯುತ್ ಒದಗಿಸಬೇಕು, ರಾಜ್ಯದಲ್ಲಿ 143ಕ್ಕೂ ಹೆಚ್ಚಿನ ತಾಲೂಕುಗಳು ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಶೀಘ್ರ ಪರಿಹಾರ ಕಾರ್ಯ ಕೈ ಗೊಳ್ಳಬೇಕೆಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ನೆರವಿಗೆ ಬರುವುದರೊಂದಿಗೆ ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸುವ ಮೂಲಕ ಧೈರ್ಯ ತುಂಬಬೇಕೆಂದರು.
100 ದಿನದ ಆಡಳಿತದಲ್ಲಿ ನುಡಿದಂತೆ ನಡೆದಿದ್ದೇವೆ ಎನ್ನುತ್ತಿರುವ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಮತದಾರರಿಗೆ ಗ್ಯಾರಂಟಿ ಯೋಜನೆಯ ಭರವಸೆ ನೀಡಿ ಎಲ್ಲವನ್ನೂ ಗೊಂದಲಕ್ಕೆ ಈಡಾಗುವಂತೆ ಮಾಡಿದೆ. ರಾಜ್ಯ ಸರಕಾರವು ನಿರಂತರವಾಗಿ ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದು, ವರ್ಗಾವಣೆ ದಂಧೆ ಬಿಟ್ಟರೆ ಯಾವುದೇ ಅಭಿವೃದ್ದಿ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿದರು.
ರೈತ ಮೋರ್ಚಾ ರಾಜ್ಯ ಸಮಿತಿ ಸದಸ್ಯೆ ಯಮುನಾ ಚಂಗಪ್ಪ, ರೈತ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಮಚ್ಚಂಡ ಪ್ರಕಾಶ್ ಬೆಳ್ಯಪ್ಪ, ಮಹೇಶ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಭುವನೇಶ್ವರಿ, ಕನ್ನಿಗಂಡ ಸುಭಾಷ್, ರೂಪಾ ಸತೀಶ್, ದೇಶ್‌ರಾಜ್ ಮತ್ತಿತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net